ವಿಶ್ವಕಪ್ ಕ್ವಾಲಿಫಯರ್‌ನಲ್ಲಿ ಶ್ರೀಲಂಕಾ ತನ್ನ ಮೊದಲ ಪಂದ್ಯದಲ್ಲಿ ಭಾರೀ ಅಂತರದ ಗೆಲುವು ಸಾಧಿಸಿದೆ. ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ ನಿಗದಿತ 50 ಓವರ್‌ಗಳಲ್ಲಿ 355/6 ರನ್‌ಗಳನ್ನು ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಯುಎಇ ತಂಡ ವನಿಂದು ಹಸರಂಗ ಬೌಲಿಂಗ್ ದಾಳಿಗೆ ನಲುಗಿದ್ದು 180 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಶ್ರೀಲಂಕಾ 175 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡಕ್ಕೆ ಈ ಪಂದ್ಯದಲ್ಲಿ ಅದ್ಭುತ ಆರಂಭ ದೊರೆಯಿತು. ಫಾತುಮ್ ನಿಸ್ಸಂಕ ಹಾಗೂ ಕರುಣರತ್ನೆ ಜೋಡಿ ಮೊದಲ ವಿಕೆಟ್‌ಗೆ 95 ರನ್‌ಗಳ ಜೊತೆಯಾಟ ನೀಡಿದರು. ಅಗ್ರ ಕ್ರಮಾಂಖದ ನಾಲ್ವರು ಆಟಗಾರರು ಅರ್ಧ ಶತಕದ ಕೊಡುಗೆ ನಿಡಿ ಮಿಂಚಿದ್ದಾರೆ. ಫಾತುಮ್ ನಿಸ್ಸಂಕ 57 ರನ್‌ಗಳನ್ನು ಗಳಿಸಿದರೆ ಕರುಣರತ್ನೆ 52 ರನ್‌ಗಳಿಸಿದರು.

ಇನ್ನು ಕುಸಾಲ್ ಮೆಂಡಿಸ್ 78 ರನ್ ಹಾಗೂ ಸಮರವಿಕ್ರಮ 73 ರನ್‌ಗಳಿಸಿದರು. ಇನ್ನು ಅಸಲಂಕಾ ಕೂಡ 23 ಎಸೆತಗಳಲ್ಲಿ 48 ರನ್‌ಗಳಿಸಿ ಅಬ್ಬರಿಸಿದರು. ಕೊನೆಯಲ್ಲಿ ಹಸರಂಗ 12 ಎಸೆತಗಳನ್ನು ಎದುರಿಸಿ 23 ರನ್ ಸಿಡಿಸಿ ಕಾರಣ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಭರ್ಜರಿ 355 ರನ್‌ಗಳನ್ನು ಕಲೆಹಾಕಿತು.
ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಯುಎಇ ತಂಡ ಹೆಚ್ಚಿನ ಪ್ರತಿರೋಧವೊಡ್ಡಲು ಸಾಧ್ಯವಾಗಲಿಲ್ಲ. ನಾಯಕ ಮೊಹಮ್ಮದ್ ವಾಸಿಂ ಹಾಗೂ ವ್ರಿತ್ಯ ಅರವಿಂದ್ ತಲಾ 39 ರನ್‌ಗಳನ್ನು ಗಳಿಸಿದ್ದು ತಮಡದ ಪರ ಅತಿ ಹೆಚ್ಚಿನ ಸ್ಕೋರ್ ಆಗಿದೆ. ಸ್ಪಿನ್ನರ್ ಹಸರಂಗ ದಾಳಿಗೆ ತತ್ತರಿಸಿದ ಯುಎಇ ಕೇವಲ 39 ಓವರ್‌ಗಳಲ್ಲಿ 180 ರನ್‌ಗಳನ್ನು ಗಳಿಸಿ ಆಲೌಟ್ ಆಗುವ ಮೂಲಕ ದೊಡ್ಡ ಅಂತರದಿಂದ ಶರಣಾಗಿದೆ.
ಇನ್ನು ಈ ಪಂದ್ಯದಲ್ಲಿ 8 ಓವರ್‌ಗಳ ಬೌಲಿಂಗ್ ನಡೆಸಿದ ಹಸರಂಗ ಕೇವಲ 24 ರನ್‌ಗಳನ್ನು ನೀಡಿ 6 ವಿಕೆಟ್ ಕಬಳಿಸಿದರು. ಕೇವಲ 3ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ ಹಸರಂಗ.ಉಳಿದಂತೆ ಲಹಿರು ಕುಮಾರ, ಮಹೀಶ ತೀಕ್ಷಣ ಹಾಗೂ ಧನಂಜಯ ಡಿಸಿಲ್ವ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಪ್ಲೇಯಿಂಗ್ XI): ಮುಹಮ್ಮದ್ ವಸೀಮ್ (ನಾಯಕ), ಅಲಿ ನಾಸೀರ್, ವೃತ್ಯ ಅರವಿಂದ್ (ವಿಕೆಟ್ ಕೀಪರ್), ರೋಹನ್ ಮುಸ್ತಫಾ, ಬಾಸಿಲ್ ಹಮೀದ್, ಆಸಿಫ್ ಖಾನ್, ರಮೀಜ್ ಶಹಜಾದ್, ಅಯಾನ್ ಅಫ್ಜಲ್ ಖಾನ್, ಕಾರ್ತಿಕ್ ಮೆಯ್ಯಪ್ಪನ್, ಜಹೂರ್ ಖಾನ್, ಮುಹಮ್ಮದ್ ಜವಾದುಲ್ಲಾ
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಮಹೇಶ್ ತೀಕ್ಷಣ, ಕಸುನ್ ರಜಿತ, ಲಹಿರು ಕುಮಾರ