ವಿಶ್ವಕಪ್ ಭಾರತದಲ್ಲಿ ಅಧಿಕೃತವಾಗಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಆದರೆ ಭಾರೀ ಕುತೂಹಲ ಮೂಡಿಸಿದ್ದ ಈ ಮೆಗಾ ಟೂರ್ನಿಯ ಆರಂಭದಲ್ಲಿಯೇ ಆಯೋಜಕರಾದ ಬಿಸಿಸಿಐ ಹಾಗೂ ಐಸಿಸಿ ತೀವ್ರ ಮುಖಭಂಗಕ್ಕೆ ಒಳಗಾಗಿದೆ.
ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ಜಗತ್ತಿನ ಅತಿ ದೊಡ್ಡ ಕ್ರೀಡಾಂಗಣ ಎನ್ನುವ ಖ್ಯಾತಿ ಪಡೆದುಕೊಂಡಿರುವ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಉದ್ಘಾಟನಾ ಪಂದ್ಯ ಆಯೋಜನೆಯಾಗಿತ್ತು. ಆದರೆ ಈ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದತ್ತ ಸುಳಿದಿರಲೇ ಇಲ್ಲ. ಕೆಲವೇ ಕೆಲವು ಸೀಟುಗಳು ಮಾತ್ರವೇ ಭರ್ತಿಯಾಗಿದ್ದ ಕಾರಣ ಕ್ರೀಡಾಂಗಣ ಸಂಪೂರ್ಣವಾಗಿ ಖಾಲಿಯಾಗಿತ್ತು. ಹೀಗಾಗಿ ಸಾಕಷ್ಟು ಟೀಕೆಗಳು ಕೇಳಿ ಬಂದಿದೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ 1,32,000 ದಷ್ಟು ಅಭಿಮಾನಿಗಳ ಸಾಮರ್ಥ್ಯವನ್ನು ಹೊಂದಿದೆ. ಆದರೆ ಇಷ್ಟು ಬೃಹತ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಅಲ್ಲಿನ ಸ್ಥಳೀಯ ಅಭಿಮಾನಿಗಳು ಅತ್ಯಂತ ನೀರಸವಾದ ಪ್ರತಿಕ್ರಿಯೆ ನೀಡಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ ಭಾಗಿಯಾಗುತ್ತಿಲ್ಲವಾದ ಕಾರಣ ಅಭಿಮಾನಿಗಳಿಗೆ ಈ ಪಂದ್ಯದ ಮೇಲೆ ಹೆಚ್ಚಿನ ಕುತೂಹಲ ಇಲ್ಲ. ಹಾಗಾಗಿ ಇಷ್ಟು ದೊಡ್ಡ ಕ್ರೀಡಾಂಗಣದಲ್ಲಿ ಈ ಉದ್ಘಾಟನಾ ಪಂದ್ಯವನ್ನು ಆಯೋಜನೆ ಮಾಡಿ ಮುಜುಗರಕ್ಕೆ ಒಳಗಾಗುವ ಅಗತ್ಯವಿತ್ತಾ ಎನ್ನುವ ಪ್ರಶ್ನೆಗಳು ಎದ್ದಿದೆ.
ಪರಿಹಾರ ನೀಡಿದ ವಿರೇಂದ್ರ ಸೆಹ್ವಾಗ್
ಒಂದೆಡೆ ಕ್ರೀಡಾಂಗಣ ಅಭಿಮಾನಿಗಳು ಇಲ್ಲದೆ ಖಾಲಿಯಾಗಿರುವ ಕಾರಣ ಆಯೋಜಕರ ವಿರುದ್ಧ ಸಾಕಷ್ಟು ಟೀಕೆಗಳ ಪ್ರಹಾರಗಳೇ ಹರಿದುಬರುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆಯೋಜಕರಿಗೆ ಅದ್ಭುತವಾದ ಸಲಹೆಯೊಂದನ್ನು ನೀಡಿದ್ದಾರೆ.
"ಆಫೀಸ್ ಅವಧಿಗಳು ಮುಗಿದ ಬಳಿಕ ಜನರು ಸೇರಬಹುದು. ಆದರೆ ಭಾರತ ಆಡದ ಪಂದ್ಯಗಳಲ್ಲಿ ಶಾಲೆ ಹಾಗೂ ಕಾಲೇಜು ಮಕ್ಕಳಿಗೆ ಉಚಿತ ಟಿಕೆಟ್‌ಗಳನ್ನು ನೀಡಬಹುದು. 50 ಓವರ್‌ಗಳ ಕ್ರಿಕೆಟ್ ಹೊಳಪು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ವಿಶ್ವಕಪ್‌ನ ಆಟವನ್ನು ನೋಡುವ ವಿಶೇಷ ಅನುಭವ ಯುವಕರಿಗೆ ದೊರೆಯುತ್ತದೆ. ಆಟಗಾರರು ಕೂಡ ಪೂರ್ಣ ಪ್ರಮಾಣದ ಪ್ರೇಕ್ಷಕರ ಸಮ್ಮುಖದಲ್ಲಿ ಆಡಿದ ಅನುಭವ ಪಡೆಯುತ್ತಾರೆ" ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.
ಶುಕ್ರವಾರ ನಡೆಯಲಿದೆ ಪಾಕಿಸ್ತಾನ vs ನೆದರ್ಲೆಂಡ್ಸ್ ಪಂದ್ಯ
ಇನ್ನು ಶುಕ್ರವಾರ ಟೂರ್ನಿಯ ಎರಡನೇ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಪಾಕಿಸ್ಥಾನ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಈ ಮೂಲಕ ಪಾಕಿಸ್ತಾನ ತಂಡ 2016ರ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಅಂತಾರಾಷ್ಟ್ರೀಯ ಪಂದ್ಯವೊಂದನ್ನು ಆಡಿದಂತಾಗಲಿದೆ.