ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಣ ಲಾರ್ಡ್ಸ್‌ನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನ ಎರಡನೇ ದಿನವೂ 14 ವಿಕೆಟ್‌ಗಳು ಬಿದ್ದವು. ಪ್ರಶಸ್ತಿ ಸುತ್ತಿನ ಕಾದಾಟದ ಮೊದಲ ದಿನವೂ 14 ವಿಕೆಟ್‌ಗಳು ಬಿದಿದ್ದವು. ಹೀಗಾಗಿ ಪಂದ್ಯ ರೋಚಕ ಘಟ್ಟದತ್ತ ಮುಖ ಮಾಡಿದೆ. ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ ಈಗಾಗಲೇ 218 ರನ್‌ಗಳ ಮುನ್ನಡೆಯನ್ನು ಸಾಧಿಸಿದ್ದು, ಇನ್ನು ಎರಡು ವಿಕೆಟ್‌ಗಳು ಬಾಕಿ ಉಳಿದಿವೆ.
ಗುರುವಾರ ದಕ್ಷಿಣ ಆಫ್ರಿಕಾ 4 ವಿಕೆಟ್‌ಗೆ 43 ರನ್‌ಗಳಿಂದ ಆಟ ಮುಂದುವರೆಸಿತು. ದಕ್ಷಿಣ ಆಫ್ರಿಕಾದ ಪರ ಯಾವೊಬ್ಬ ಬ್ಯಾಟರ್ ಅರ್ಧಶತಕ ಬಾರಿಸಿಲಿಲ್ಲ. ತೆಂಬು ಬವುಮಾ ಅವರ ತಾಳ್ಮೆಯ ಇನಿಂಗ್ಸ್ 36 ರನ್‌ಗಳಿಗೆ ಕೊನೆಗೊಂಡಿತು. ಡೇವಿಡ್ ಬೆಡಿಂಗ್ಹ್ಯಾಮ್ (45 ರನ್) ಹಾಗೂ ಕೈಲ್ ವೆರ್ರೆನ್ನೆ (13 ರನ್) ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ಡಬಲ್ ಡಿಜಿಟ್ ಮುಟ್ಟುವಲ್ಲಿ ವಿಫಲರಾದರು. ಪರಿಣಾಮ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿತು.

ಆಸ್ಟ್ರೇಲಿಯಾ ಪರ ಮೊದಲ ಇನಿಂಗ್ಸ್‌ನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಅಮೋಘ ದಾಳಿ ಸಂಘಟಿಸಿ ಮಿಂಚಿದರು. ವೇಗಿ ಕಮಿನ್ಸ್ 18.1 ಓವರ್‌ಗಳಲ್ಲಿ 28 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇನ್ನೋರ್ವ ವೇಗಿ ಮಿಚೆಲ್ ಸ್ಟಾರ್ಕ್ 2, ಜೋಶ್ ಹ್ಯಾಜಲ್‌ವುಡ್ 1 ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಪರ ಸ್ಟಾರ್ ಬ್ಯಾಟರ್‌ಗಳು ಎರಡನೇ ಇನಿಂಗ್ಸ್‌ನಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಆರಂಭಿಕ ಉಸ್ಮಾನ್ ಖವಾಜ (6) ಹಾಗೂ ಕ್ಯಾಮರೂನ್ ಗ್ರೀನ್ (0) ಅವರನ್ನು ರಬಡಾ ಒಂದೇ ಓವರ್‌ನಲ್ಲಿ ಪೆವಿಲಿಯನ್‌ಗೆ ಅಟ್ಟಿದರು. ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಾರ್ನಸ್ ಲಂಬುಶೇನ್ (22) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು ಮಾರ್ಕೊ ಜಾನ್ಸನ್ ತೋಡಿದ ಖೆಡ್ಡಾಗೆ ಬಲಿಯಾದರು.
ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಅನುಭವಿ ಸ್ಟೀವನ್ ಸ್ಮಿತ 13 ರನ್ ಸಿಡಿಸಿದ್ದಾಗ ಲುಂಗಿ ಎನ್‌ಗಿಡಿ ಎಸೆತವನ್ನು ತಪ್ಪಾಗಿ ಗ್ರಹಿಸಿ ಔಟ್ ಆದರು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಮತ್ತೊಬ್ಬ ಬ್ಯಾಟರ್ ಬ್ಯೂ ವೆಬ್‌ಸ್ಟರ್ಸಹ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಫೈನಲ್ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುತ್ತಿದ್ದ ಟ್ರಾವಿಸ್ ಹೆಡ್ ಸಹ ಜವಾಬ್ದಾರಿ ಮರೆತರು.

ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ 50 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 43 ರನ್ ಸಿಡಿಸಿದರು. ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 144 ರನ್ ಕಲೆ ಹಾಕಿದೆ. ಆಸೀಸ್ ಪರ ಮೂರನೇ ದಿನಕ್ಕೆ ಮಿಚೆಲ್ ಸ್ಟಾರ್ಕ್ (ಅಜೇಯ 16), ನಾತನ್ ಲಿಯಾನ್ (ಅಜೇಯ 1) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಪರ ವೇಗದ ಬೌಲರ್ ಕಗಿಸೊ ರಬಾಡ ಹಾಗೂ ಲುಂಗಿ ಎನ್‌ಗಿಡಿ ತಲಾ ಮೂರು ವಿಕೆಟ್ ಕಬಳಿಸಿದರು.