
ಮಹಿಳಾ ಪ್ರೀಮಿಯರ್ ಲೀಗ್ 2023ರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈನ ಬ್ರಬೌರ್ನೆ ಕ್ರೀಡಾಂಗಣದಲ್ಲಿ ಈ ಫೈನಲ್ ಪಂದ್ಯ ನಡೆಯುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ತಾನ ಪಡೆಯುವ ಮೂಲಕ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಮಣಿಸುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತು.
ಲೀಗ್ ಹಂತದಲ್ಲಿ ಎರಡೂ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಮುಂಬೈ ಇಂಡಿಯನ್ಸ್ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ, ಎರಡನೇ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸುವ ಮೂಲಕ ಸೇಡು ತೀರಿಸಿಕೊಂಡಿತ್ತು.
ಎರಡೂ ತಂಡಗಳಲ್ಲಿ ಬಲಿಷ್ಠ ಬ್ಯಾಟಿಂಗ್ ಮತ್ತು ಆಲ್‌ರೌಂಡರ್ ಗಳ ಪಡೆಯನ್ನು ಹೊಂದಿದ್ದು, ಫೈನಲ್ ಪಂದ್ಯದಲ್ಲಿ ಗೆಲುವಿಗಾಗಿ ರೋಚಕ ಹಣಾಹಣಿಯನ್ನು ನಿರೀಕ್ಷೆ ಮಾಡಲಾಗಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಹೇಯ್ಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಇಸ್ಸಿ ವಾಂಗ್ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು. ಇದು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಹ್ಯಾಟ್ರಿಕ್ ಎನಿಸಿಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮೆಗ್ ಲ್ಯಾನಿಂಗ್ ಮತ್ತು ಶಫಾಲಿ ವರ್ಮಾ ಆರಂಭದಲ್ಲಿ ಅಬ್ಬರಿಸಿದರೆ, ಲಾರಾ ಹ್ಯಾರಿಸ್, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ಜೆಸ್ ಜೊನಾಸೆನ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಶಕ್ತಿ ತುಂಬಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕರು ಪ್ರಮುಖವಾಗಲಿದ್ದಾರೆ. ಶಫಾಲಿ ವರ್ಮಾ ಮತ್ತು ಮೆಗ್ ಲ್ಯಾನಿಂಗ್ ಮೊದಲ ವಿಕೆಟ್‌ಗೆ ಉತ್ತಮ ರನ್ ಕಲೆಹಾಕಿದರೆ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಮೊತ್ತ ಕಲೆಹಾಕುವುದು ಸುಲಭವಾಗಲಿದೆ.

ಯಾರಾಗ್ತಾರೆ ಚಾಂಪಿಯನ್?
ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯ ಚಾಂಪಿಯನ್ ಆಗಲಿ ಎರಡೂ ತಂಡಗಳು ಪೈಪೋಟಿ ನಡೆಸಲಿವೆ. ಬ್ರಬೌರ್ನೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಹೈಸ್ಕೋರಿಂಗ್ ಪಂದ್ಯವಾಗುವ ಸಾಧ್ಯತೆ ಇದೆ. ಎರಡೂ ತಂಡಗಳ ಬ್ಯಾಟಿಂಗ್ ಬಳಗ ಶಕ್ತಿಯುತವಾಗಿರುವುದು ಆಟದಲ್ಲಿ ಪೈಪೋಟಿಯನ್ನು ಹೆಚ್ಚಿಸಿದೆ.
ಫೈನಲ್ ಪಂದ್ಯಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಉಳಿಸಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಪೂನಂ ಯಾದವ್ ಬದಲಾಗಿ ಮಿನ್ನು ಮಣಿ ತಂಡದಲ್ಲಿ ಸ್ಥಾಣ ಪಡೆದುಕೊಂಡಿದ್ದಾರೆ.

ಉಭಯ ತಂಡಗಳ ಆಡುವ ಬಳಗ
ಮುಂಬೈ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಪೂಜಾ ವಸ್ತ್ರಾಕರ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.
ಡೆಲ್ಲಿ ಕ್ಯಾಪಿಟಲ್ಸ್ : ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಸ್ ಜೋನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಮಿನ್ನು ಮಣಿ.