
ಮುಂಬೈನ ಬ್ರಾಬೌರ್ನೆ ಅಂಗಳದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಅತ್ಯುತ್ತಮ ಬ್ಯಾಟಿಂಗ್ ಮಾಡಿತು. 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿದ್ದು, ಆರ್ ಸಿಬಿಗೆ ದೊಡ್ಡ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ಅತ್ಯುತ್ತಮ ಪ್ರದರ್ಶನ ನೀಡಿತು. ಸೋಫಿಯಾ ಡಂಕ್ಲಿ 16 ರನ್ ಗಳಿಸಿ ಔಟಾದರು. ಲಾರಾ ವೊಲ್ವಾರ್ಡ್ ಮಾತ್ರ ಅತ್ಯುತ್ತಮ ಬ್ಯಾಟಿಂಗ್ ಮುಂದುವರೆಸಿದರು. ಜೀವದಾನದ ಲಾಭ ಪಡೆದ ಅವರು, ಆರ್ ಸಿಬಿ ಬೌಲರ್ ಗಳನ್ನು ಕಾಡಿದರು.
42 ಎಸೆತಗಳಲ್ಲಿ 9 ಬೌಂಡರಿ 2 ಭರ್ಜರಿ ಸಿಕ್ಸರ್ ನೆರವಿನಿಂದ 68 ರನ್ ಗಳಿಸಿದರು. ಸಬ್ಬಿನೇನಿ ಮೇಘನಾ 32 ಎಸೆತಗಳಲ್ಲಿ 31 ರನ್ ಗಳಿಸಿದರು. ಆಲ್‌ರೌಂಡರ್ ಆಶ್ ಗಾರ್ಡ್ನರ್ 26 ಎಸೆತಗಳಲ್ಲಿ 6 ಬೌಂಡರಿ ಒಂದು ಸಿಕ್ಸರ್ ನೆರವಿನಿಂದ 41 ರನ್ ಗಳಿಸಿದರು. ದಯಾಳ್ ಹೇಮಲತಾ 6 ಎಸೆತಗಳಲ್ಲಿ 16 ರನ್ ಗಳಿಸಿ ಮಿಂಚಿದರು. ಹರ್ಲೀನ್ ಡಿಯೋಲ್ ಕೂಡ 5 ಎಸೆತಗಳಲ್ಲಿ 12 ರನ್ ಗಳಿಸುವ ಮೂಲಕ ಗುಜರಾತ್ ಜೈಂಟ್ಸ್ ದೊಡ್ಡ ಮೊತ್ತ ಗಳಿಸಲು ಸಹಾಯ ಮಾಡಿದರು.

ಗೆದ್ದರೆ ಮಾತ್ರ ಪ್ಲೇ ಆಫ್ ಆಸೆ ಜೀವಂತ
ಎರಡೂ ತಂಡಗಳಿಗೆ ಈ ಪಂದ್ಯ ಗೆಲ್ಲುವುದು ಮುಖ್ಯವಾಗಿದೆ. ಇಂದು ಗೆಲ್ಲುವ ತಂಡಕ್ಕೆ ಪ್ಲೇ ಆಫ್ ಆಸೆ ಜೀವಂತವಾಗಿರಲಿದೆ. ಆರ್ ಸಿಬಿ ಸೋತರೆ ಪ್ಲೇ ಆಫ್ ಆಸೆ ಕೊನೆಯಾಗಲಿದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಮಂಧಾನ ಪಡೆ ಈ ಗುರಿಯನ್ನು ಬೆನ್ನತ್ತುವ ವಿಶ್ವಾಸದಲ್ಲಿದೆ.
ಸೋಫಿ ಡಿವೈನ್ ಮತ್ತು ನಾಯಕಿ ಸ್ಮೃತಿ ಮಂದಾನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬೇಕಾಗಿದೆ. ಮಂದಾನ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲವಾಗಿದ್ದಾರೆ ಗುಜರಾತ್ ವಿರುದ್ಧ ಅವರು ಸಿಡಿದರೆ ಮಾತ್ರ ಆರ್ ಸಿಬಿ ಗೆಲುವು ಸುಲಭವಾಗಲಿದೆ.

ಉಭಯ ತಂಡಗಳ ಆಡುವ ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸೋಫಿ ಡಿವೈನ್, ಸ್ಮೃತಿ ಮಂಧಾನ(ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್.
ಗುಜರಾತ್ ಜೈಂಟ್ಸ್: ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ಸ್ನೇಹ ರಾಣಾ(ನಾಯಕಿ), ತನುಜಾ ಕನ್ವರ್, ಅಶ್ವನಿ ಕುಮಾರಿ.