
ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ ತಂಡ ಗೆಲುವಿನ ಓಟ ಮುಂದುವರಿದಿದೆ. ಹರ್ಮನ್‌ಪ್ರೀತ್ ನೇತೃತ್ವದ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ವಿರುದ್ಧದ ಪಂದ್ಯದಲ್ಲಿಯೂ ಅಮೋಘ ಪ್ರದರ್ಶನ ನೀಡಿದ್ದು ಭರ್ಜರಿ 8 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಆಡಿದ ಮೂರು ಪಂದ್ಯಗಳಲ್ಲಿ ಮೂರರಲ್ಲಿಯೂ ಗೆದ್ದು ಅಜೇಯ ತಂಡವಾಗಿ ಉಳಿದುಕೊಂಡಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀರಸ ಬ್ಯಾಟಿಂಗ್ ಪ್ರದರ್ಶಿಸಿದ್ದು 105 ರನ್‌ಗಳಿಸಿ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಕೇವಲ 15 ಓವರ್‌ಗಳಲ್ಲಿಯೇ ಈ ಗುರಿ ಬೆನ್ನಟ್ಟಿದ್ದು 8 ವಿಕೆಟ್‌ಗಳ ಅಂತರದ ಭಾರೀ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಬಹುತೇಕ ಎಲ್ಲಾ ಆಟಗಾರರ್ತಿಯರು ಕೂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಆರಂಭಿಕ ಆಟಗಾರ್ತಿ ಶಫಾರ್ಲಿ ವರ್ಮಾ ಕೇವಲ ಎರಡು ರನ್‌ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಡೆಲ್ಲಿ ತಂಡದ ಕುಸಿತ ಆರಂಭಗೊಂಡಿತು. ನಾಯಕಿ ಮೆಗ್ ಲಾನಿಂಗ್ ಮಾತ್ರವೇ ಡೆಲ್ಲಿ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಜಮಿಮಾ ರೋಡ್ರಿಗಸ್ ಬ್ಯಾಟ್‌ನಿಂದ ಸಣ್ಣ ಹೋರಾಟ ಬಂದಿತು. ಲ್ಯಾನಿಂಗ್ 41 ಎಸೆತಗಳಲ್ಲಿ 43 ರನ್‌ಗಳಿಸಿದರೆ ಜಮಿಮಾ 18 ಎಸೆತ ಎದುರಿಸಿ 25 ರನ್‌ಗಳಿಸಿದರು.
ಉಳಿದಂತೆ ಎಲ್ಲಾ ಬ್ಯಾಟರ್‌ಗಳು ಕೂಡ ಒಂದಂಕಿಗೆ ವಿಕೆಟ್ ಕೈಚೆಲ್ಲಿದ್ದರು. 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಧಾ ಯಾದವ್ 10 ರನ್ ಗಳಿಸಿದರು. ಇನ್ನು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಬೌಲರ್‌ಗಳು ಸಾಂಘಿಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಸೈಕಾ ಇಶಾಕ್, ಇಸೀ ವಾಂಗ್, ಹಾಗೂ ಹೇಲಿ ಮ್ಯಾಥ್ಯೂಸ್ ತಲಾ ಮೂರು ವಿಕೆಟ್ ಕಬಳಿಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ ನೀಡಿದರು. ಒಂದು ವಿಕೆಟ್ ಪೂಜಾ ವಸ್ತ್ರಾಕರ್ ಪಾಲಾಗಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀಡಿದ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಎಲ್ಲೂ ಎಡವಲಿಲ್ಲ. ಉತ್ತಮ ಆರಂಭ ಪಡೆದ ಎಂಐ ಪರವಾಗಿ ಆರಂಭಿಕ ಆಟಗಾರ್ತಿಯರಾದ ಯಸ್ತಿಕಾ ಭಾಟಿಯಾ 41 ರನ್‌ಗಳಿಸಿ ಔಟಾದರೆ ಹೀಲೀ ಮ್ಯಾಥ್ಯೂಸ್ 32 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಇನ್ನು ನ್ಯಾಟ್ ಸಿವಿರ್ ಬ್ರಂಟ್ ಹಾಗೂ ನಾಯಕಿ ಹರ್ಮನ್ ಅಜೇಯವಾಗುಳಿದಿದ್ದು ಕ್ರಮವಾಗಿ 23 ಹಾಗೂ 11 ರನ್‌ಗಳಿಸಿದ್ದಾರೆ.
ಇನ್ನು ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅಗ್ರಸ್ಥಾನ ಭದ್ರವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿಯಲ್ಲಿ ಮೊದಲ ಸೋಲಿನ ರುಚಿ ಕಂಡಂತಾಗಿದೆ.
ಈ ಎರಡು ತಂಡಗಳಿಗೂ ಇದು ಮೂರನೇ ಪಂದ್ಯವಾಗಿದೆ. ಆಡಿರುವ ಎರಡು ಪಂದ್ಯಗಳಲ್ಲಿಯೂ ಎರಡು ತಂಡಗಳು ಕೂಡ ಗೆಲುವು ಸಾಧಿದ್ದು ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿದೆ. ನೆಟ್ ರನ್‌ರೇಟ್ ಆಧಾರದಲ್ಲಿ ಮುಂಬೈ ಇಂಡಿಯನ್ಸ ಮೊದಲ ಸ್ಥಾನದಲ್ಲಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿದೆ
ಮುಂಬೈ ಇಂಡಿಯನ್ಸ್ ಮಹಿಳೆಯರು (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮಂಜೋತ್ ಕೌರ್, ಹುಮೈರಾ ಕಾಜಿ, ಜಿಂತಿಮಣಿ ಕಲಿತಾ, ಸೈಕಾ ಇಶಾಕ್
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಜೆಮಿಮಾ ರಾಡ್ರಿಗಸ್, ಆಲಿಸ್ ಕ್ಯಾಪ್ಸಿ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಮಿನ್ನು ಮಣಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್
ಬೆಂಚ್: ಲಾರಾ ಹ್ಯಾರಿಸ್, ಜಸಿಯಾ ಅಖ್ತರ್, ಅಪರ್ಣಾ ಮೊಂಡಲ್, ಪೂನಂ ಯಾದವ್, ಟಿಟಾಸ್ ಸಾಧು, ಸ್ನೇಹಾ ದೀಪ್ತಿ, ಅರುಂಧತಿ ರೆಡ್ಡಿ