
ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಹರ್ಮನ್‌ಪ್ರೀತ್ ಕೌರ್ ಪಡೆ ಇತಿಹಾಸ ನಿರ್ಮಿಸಿದೆ.
ಮುಂಬೈನ ಬ್ರಬೌರ್ನೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೊಚ್ಚಲ ಕಪ್ ಗೆಲ್ಲಲು ಎರಡೂ ತಂಡಗಳು ಉತ್ತಮವಾಗಿ ಪೈಪೋಟಿ ನಡೆಸಿದವು. ಆದರೆ, ಮುಂಬೈನ ನ್ಯಾಟ್ ಸಿವರ್ ಬ್ರಂಟ್ ಅಜೇಯ ಅರ್ಧಶತಕ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಕನಸನ್ನು ಭಗ್ನಗೊಳಿಸಿದರು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಮುಂಬೈನ ಅತ್ಯುತ್ತಮ ಬೌಲಿಂಗ್ ದಾಳಿಗೆ ಕುಸಿದ ಡೆಲ್ಲಿ ಒಂದು ಹಂತದಲ್ಲಿ 100ಕ್ಕಿಂತ ಕಡಿಮೆ ರನ್ ಗಳಿಸುವ ಅಪಾಯದಲ್ಲಿತ್ತು. ಆದರೆ, ಶಿಖಾ ಪಾಂಡೆ ಮತ್ತು ರಾಧಾ ಯಾದವ್ ಅತ್ಯುತ್ತಮ ಜೊತೆಯಾಟ ಆಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಅಂತಿಮವಾಗಿ 20 ಓವರ ಗಳಲ್ಲಿ 9 ವಿಕೆಟ್ ಕಳೆದುಕೊಂಡು 131 ರನ್‌ಗಳನ್ನು ಗಳಿಸಿತು.
ಸಾಧಾರಣ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಕೂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ನ್ಯಾಟ್ ಸಿವರ್ ಬ್ರಂಟ್ ಅತ್ಯುತ್ತಮ ಜೊತೆಯಾಟ ಆಡುವ ಮೂಲಕ ಮುಂಬೈ ತಂಡಕ್ಕೆ ಆಸರೆಯಾದರು.

ನ್ಯಾಟ್ ಸಿವರ್ ಬ್ರಂಟ್ ಅಮೋಘ ಇನ್ನಿಂಗ್ಸ್
ಮುಂಬೈ ಇಂಡಿಯನ್ಸ್ ಆರಂಭಿಕರಾದ ಯಾಸ್ತಿಕಾ ಭಾಟಿಯಾ 4 ರನ್ ಗಳಿಸ ಔಟಾದರೆ, ಹೇಲಿ ಮ್ಯಾಥ್ಯೂಸ್ 13 ರನ್ ಗಳಿಸಿ ಔಟಾದರು. ನಂತರ ಜೊತೆಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ನ್ಯಾಟ್ ಸಿವರ್ ಬ್ರಂಟ್ ತಾಳ್ಮೆಯ ಜೊತೆಯಾಟ ಆಡಿದರು. ಈ ಜೋಡಿ ಮೂರನೇ ವಿಕೆಟ್‌ಗೆ 72 ರನ್ ಕಲೆಹಾಕುವ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲುವಿನ ಸಮೀಪ ತಂದರು.
ನಾಯಕಿ ಹರ್ಮನ್‌ಪ್ರೀತ್ ಕೌರ್ 39 ಎಸೆತಗಳಲ್ಲಿ 37 ರನ್ ಗಳಿಸಿದ್ದಾಗ ರನೌಟ್ ಆದರು. ಆದರೆ, ತಮ್ಮ ಉತ್ತಮ ಆಟವನ್ನು ಮುಂದುವರೆಸಿದ ನ್ಯಾಟ್ ಸಿವರ್ ಬ್ರಂಟ್ 55 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 60 ರನ್ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು. ಮೆಲಿಯಾ ಕೆರ್ ಕೂಡ 8 ಎಸೆತಗಳಲ್ಲಿ ಅಜೇಯ 14 ರನ್ ಗಳಿಸಿ ಗೆಲುವನ್ನು ಸುಲಭವಾಗಿಸಿದರು.

ಮುಂಬೈ ಇಂಡಿಯನ್ಸ್ ಮಿಂಚಿನ ಬೌಲಿಂಗ್
ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಅಮೋಘ ಬೌಲಿಂಗ್ ಪ್ರದರ್ಶನ ನೀಡಿತು. ಪ್ಲೇಆಫ್ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದು ಮಿಂಚಿದ್ದ ಇಸ್ಸಿ ವಾಂಗ್ ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. 4 ಓವರ್ ಗಳಲ್ಲಿ 42 ರನ್ ನೀಡಿ 3 ವಿಕೆಟ್ ಪಡೆದರು. ಹೇಲಿ ಮ್ಯಾಥ್ಯೂಸ್ 4 ಓವರ್ ಗಳಲ್ಲಿ ಕೇವಲ 5 ರನ್ ನೀಡಿ 3 ವಿಕೆಟ್ ಪಡೆದರು. ಮೆಲಿ ಕೆರ್ 2 ವಿಕೆಟ್ ಪಡೆದು ಮಿಂಚಿದರು.
ಒತ್ತಡದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ನ್ಯಾಟ್ ಸಿವರ್ ಬ್ರಂಟ್‌ಗೆ ಪಂದ್ಯ ಶ್ರೇಷ್ಟ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು. ಹೇಲಿ ಮ್ಯಾಥ್ಯೂಸ್ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಪಡೆದರು. ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್‌ಲ್ಯಾನಿಂಗ್ ಅತಿ ಹೆಚ್ಚು ರನ್ ಗಳಿಸಿದ್ದು ಆರೆಂಜ್ ಕ್ಯಾಪ್ ಪಡೆದುಕೊಂಡರು.