
ವುಮೆನ್ಸ ಪ್ರೀಮಿಯರ್ ಲೀಗ್‌ನಲ್ಲಿ ಸತತ ಸೋಲುಗಳನ್ನು ಕಂಡಿದ್ದ ಆರ್‌ಸಿಬಿ ಕಡೆಗೂ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಯುಪಿ ವಾರಿಯರ್ಸ್ ತಂಡದ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ತನ್ನ ಚೊಚ್ಚಲ ಗೆಲುವಿನ ರುಚಿ ಕಂಡಿತು. ಈ ಗೆಲುವಿನ ಬಳಿಕ ಮಾತನಾಡಿದ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಆರ್‌ಸಿಬಿ ತಂಡದ ನಿಷ್ಠಾವಂತ ಅಭಿಮಾನಿಗಳದಿಂದ ಸಂತಸವಾಗಿದೆ ಎಂದಿದ್ದಾರೆ.
ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗ ಅದ್ಭುತ ಪ್ರದರ್ಶನ ನೀಡಿತ್ತು. ಆರಂಬಿಕ ಕೆಲವೇ ಓವರ್‌ಗಳಲ್ಲಿ ಯುಪಿ ವಾರಿಯರ್ಸ್ ತಂಡದ ಅಗ್ರಕ್ರಮಾಂಕದ ಆಟಗಾರ್ತಿಯರನ್ನು ಕಟ್ಟಿಹಾಕುವಲ್ಲಿ ಆರ್‌ಸಿಬಿ ಬೌಲರ್‌ಗಳು ಯಶಸ್ವಿಯಾದರು. ಒಂದು ಹಂತದಲ್ಲಿ ಯುಪಿ ವಾರಿಯರ್ಸ್ ತಂಡ ಕೇವಲ 31 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಗ್ರೀಸ್ ಹ್ಯಾರಿಸ್ ಹಾಗೂ ದೀಪ್ತಿ ಶರ್ಮಾ ಜೋಡಿ ತಂಡಕ್ಕೆ ಒಂದು ಹಂತದ ಚೇತರಿಕೆ ನೀಡುವಲ್ಲಿ ಯಶಸ್ವಿಯಾದರು.
ಗ್ರೆಸ್ ಹ್ಯಾರಿಸ 46 ರನ್‌ಗಳ ಕೊಡುಗೆ ನೀಡಿದರೆ ದೀಪ್ತಿ ಶರ್ಮಾ 22 ರನ್‌ಗಳನ್ನು ಗಳಿಸಿ ಹ್ಯಾರಿಸ್ಗೆ ಉತ್ತಮ ಸಾಥ್ ನೀಡಿದರು. ಹೀಗಾಗಿ ಯುಪಿ ವಾರಿಯರ್ಸ್ ತಂಡ 100ರ ಗಡಿದಾಟಲು ಸಾಧ್ಯವಾಗಿದೆ. ಅಂತಿಮವಾಗಿ 19.3 ಓವರ್‌ಗಳಲ್ಲಿ ಯುಪಿ ವಾರಿಯರ್ಸ್ ತಂಡ 135 ರನ್‌ಗಳಿಗೆ ಆಲೌಟ್ ಆಗಿದೆ.
ಯುಪಿ ವಾರಿಯರ್ಸ್ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ 18 ಓವರ್‌ಗಳಲ್ಲಿ 5 ವಿಕೆಟ ಕಳೆದುಕೊಂಡು ಈ ಮೊತ್ತವನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಯಿಯತು. ಈ ಪಂದ್ಯದಲ್ಲಿಯೂ ನಾಯಕಿ ಸ್ಮೃತಿ ಮಂಧಾನ ವೈಫಲ್ಯ ಅನುಭವಿಸಿದರೆ ಸೋಫಿ ಡಿವೈನ್ ಅವರಿಂದಲೂ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಆದರೆ ಹೀದರ್ ನೈಟ್, ಕನಿಕಾ ಅಹುಜಾ ಹಾಗೂ ರಿಚಾ ಘೋಷ್ ಅವರಿಂದ ಜವಾಬ್ಧಾರಿಯುತ ಪ್ರದರ್ಶನ ಬಂದಿದ್ದು ಆರ್‌ಸಿಬಿ ತಂಡ ಮೊದಲ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
ಈ ಟೂರ್ನಿಯಲ್ಲಿ ಸತತ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕವೂ ಬೆಂಬಲವನ್ನು ನೀಡಿದ ತಂಡದ ಅಭಿಮಾನಿಗಳಿಗೆ ನಾಯಕಿ ಸ್ಮೃತಿ ಮಂಧಾನ ಧನ್ಯವಾದ ಸಲ್ಲಿಸಿದ್ದಾರೆ. "7ನೇ ಓವರ್ ಆಗುವಷ್ಟರಲ್ಲಿ ಕೆಲ ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ಮತ್ತೆ ಸ್ವಲ್ಪ ಆತಂಕವಾಗಿತ್ತು. ಆದರೆ ಕನಿಕಾ ಹಾಗೂ ರಿಆ ಆಡಿದ ರೀತಿ ಅದ್ಭುತವಾಗಿತ್ತು. ಅದರಲ್ಲೂ ಕನಿಕಾ ಆಡಿದ ರೀತಿಗೆ ಹೆಮ್ಮೆಯಾಗುತ್ತಿದೆ. ಆಕೆ ಆಡುವ ರೀತಿ ಹಾಗೂ ಶೈಲಿಯನ್ನು ನೋಡಲು ಉತ್ಸುಕವಾಗುತ್ತೇನೆ. ಆಕೆ 360 ಡಿಗ್ರಿ ಆಟಗಾರ್ತಿ. ಭಾರತೀಯರಲ್ಲಿ ಇದು ಅಪರೂಪ" ಎಂದಿದ್ದಾರೆ ಸ್ಮೃತಿ ಮಂಧಾನ.
"ನಾವು ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದಾಗಲೂ ಅಭಿಮಾನಿಗಳು ನಮಗೆ ಪ್ರೋತ್ಸಾಹ ತುಂಬುತ್ತಿದ್ದರು. ತಂಡದ ನಿಷ್ಠಾವಂತ ಅಭಿಮಾನಿ ಬಳಗದಿಂದಾಗಿ ನಾವು ಸಂತಸಗೊಂಡಿದ್ದೇವೆ. ಐದು ಪಂದ್ಯಗಳಲ್ಲಿ ಸೋತ ನಂತರ ಬಹುತೇಕ ತಂಡಗಳು ಇಷ್ಟು ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಹೊಂದಿರಲು ಸಾಧ್ಯವಿಲ್ಲ" ಎಂದಿದ್ದಾರೆ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ.