Sania Mirza : RCB ಮಹಿಳಾ ತಂಡದ ಮೆಂಟರ್ ಆಗಿ ಸಾನಿಯಾ ಮಿರ್ಜಾ ನೇಮಕ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದೆ. ಮಹಿಳಾ ಪ್ರೀಮಿಯರ್ ಲೀಗ್ 2023ರ ಆವೃತ್ತಿಗಾಗಿ ಅವರು ತಮ್ಮ ಮಹಿಳಾ ತಂಡದ ಮೆಂಟರ್ ಆಗಿ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ನೇಮಕ ಮಾಡಿದೆ.
ಸಾನಿಯಾ ಮಿರ್ಜಾ ಶೀಘ್ರದಲ್ಲೇ ಟೆನಿಸ್ ಲೋಕಕ್ಕೆ ವಿದಾಯ ಹೇಳುವ ಸಿದ್ಧತೆಯಲ್ಲಿದ್ದಾರೆ. ಜನವರಿ ತಿಂಗಳಿನಲ್ಲಿ ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಪಂದ್ಯವನ್ನು ಆಡಿದ್ದರು. ಮ್ಯಾಡಿಸನ್ ಕೀಸ್ ಅವರೊಂದಿಗೆ ದುಬೈ ಡ್ಯೂಟಿ ಫ್ರೀ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ ಬಳಿಕ ಸಾನಿಯಾ ಮಿರ್ಜಾ ಟೆನಿಸ್ ಲೋಕಕ್ಕೆ ಗುಡ್‌ಬೈ ಹೇಳಲಿದ್ದಾರೆ.
ಸಾನಿಯಾ ಮಿರ್ಜಾ ಟೆನಿಸ್ ತಾರೆಯಾಗಿದ್ದರು ಅವರಿಗೆ ಕ್ರಿಕೆಟ್ ಏನು ಹೊಸದಲ್ಲ. ಅವರು ಮಾಜಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶೋಯೆಬ್ ಮಲಿಕ್‌ರ ಪತ್ನಿ. ಸದ್ಯ ಮಗನೊಂದಿಗೆ ದುಬೈನಲ್ಲಿ ನೆಲೆಸಿರುವ ಸಾನಿಯಾ ಮಿರ್ಜಾ ಮಲಿಕ್‌ರಿಂದ ದೂರವಾಗಿದ್ದಾರೆ ಎನ್ನುವ ವದಂತಿ ಇದೆ.
ಈಗಾಗಲೇ ಸ್ಮೃತಿ ಮಂದಾನ, ಎಲ್ಲಿಸ್ ಪೆರ್ರಿಯಂತ ಸ್ಟಾರ್ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ತಂಡದ ಸ್ಟಾರ್ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಈಗ ಸಾನಿಯಾ ಮಿರ್ಜಾರನ್ನು ಮೆಂಟರ್ ಆಗಿ ಆಯ್ಕೆ ಮಾಡುವ ಮೂಲಕ ಅದನ್ನು ಮತ್ತಷ್ಟು ಜಾಸ್ತಿ ಮಾಡಿದೆ.

ಸಾನಿಯಾ ಮಿರ್ಜಾರನ್ನು ಸ್ವಾಗತಿಸಿದ ಆರ್ಸಿಬಿ
"ತಮ್ಮ ವೃತ್ತಿಜೀವನದಲ್ಲಿ ಹಲವು ಅಡೆ ತಡೆಗಳನ್ನು ಎದುರಿಸಿದ, ಮೈದಾನದಲ್ಲಿ ಹಲವು ದಾಖಲೆಗಹಳನ್ನು ಬರೆದು, ಭಾರತ ಮಹಿಳಾ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿರುವ, ಮೈದಾನದಲ್ಲಿ ಮತ್ತು ಹೊರಗೆ ಚಾಂಪಿಯನ್ ಎನಿಸಿಕೊಂಡಿರುವ ಸಾನಿಯಾ ಮಿರ್ಜಾರನ್ನು ಆರ್ಸಿಬಿ ಮಹಿಳಾ ತಂಡದ ಮೆಂಟರ್ ಆಗಿ ಸ್ವಾಗತಿಸಲು ಹೆಮ್ಮೆ ಪಡುತ್ತೇವೆ" ಎಂದು ಘೋಷಿಸಿದೆ.
ತಮ್ಮ ಆಟದಿಂದ ಮಾತ್ರವಲ್ಲದೆ ಸೌಂದರ್ಯದಿಂದ ಕೂಡ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದರು. ಅವರನ್ನು ಮೂಗುತಿ ಸುಂದರಿ ಎಂದೇ ಕರೆಯಲಾಗುತ್ತಿತ್ತು.

2001ರಲ್ಲಿ ಟೆನಿಸ್ ಲೋಕಕ್ಕೆ
ತಮ್ಮ 15ನೇ ವಯಸ್ಸಿನಲ್ಲಿ 2001 ರಲ್ಲಿ ಟೆನಿಸ್ ಲೋಕಕ್ಕೆ ಕಾಲಿಟ್ಟ ಸಾನಿಯಾ ಮಿರ್ಜಾ, ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ ಆಡುವ ಮೂಲಕ ಟೆನಿಸ್ ವೃತ್ತಿಜೀವನ ಆರಂಭಿಸಿದರು. 2005ರಲ್ಲಿ ಹೈದರಾಬಾದ್ ಓಪರ್ ಗೆದ್ದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು.
2007ರಲ್ಲಿ ಅವರು ವಿಶ್ವ ಟೆನಿಸ್ ಶ್ರೇಯಾಂಕದಲ್ಲಿ ಸಿಂಗಲ್ಸ್ ವಿಭಾಗದಲ್ಲಿ 27ನೇ ಸ್ಥಾನ ಗಳಿಸಿಕೊಂಡಿದ್ದರು. ಡಬಲ್ಸ್ ಸರ್ಕ್ಯೂಟ್‌ಗೆ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡರು. 2009ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಾನಿಯಾ ಮಿರ್ಜಾ-ಮಹೇಶ್ ಭೂಪತಿ ಜೋಡಿ ಮಿಶ್ರ ಪ್ರಶಸ್ತಿಯನ್ನು ಗೆದ್ದರು. 2012 ಫ್ರೆಂಚ್ ಓಪನ್ ಮತ್ತು 2014 ಯುಎಸ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಗೆದ್ದಿದ್ದಾರೆ.

ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ
2015ರಲ್ಲಿ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಒಂದಾಯಿತು. ಈ ಜೋಡಿ 2015 ವಿಂಬಲ್ಡನ್, 2015 ಯುಎಸ್ ಓಪನ್ ಮತ್ತು 2016ರಲ್ಲಿ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದರು. ಏಪ್ರಿಲ್ 2015 ರಲ್ಲಿ, ಮಿರ್ಜಾ ಡಬ್ಲ್ಯುಟಿಎ ಟೂರ್‌ನಲ್ಲಿ ಡಬಲ್ಸ್‌ನಲ್ಲಿ ನಂ. 1 ಸ್ಥಾನಕ್ಕೆ ಏರಿದರು. ಅಗ್ರಸ್ಥಾನವನ್ನು ಪಡೆದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ.
ತಮ್ಮ ಟೆನಿಸ್ ವೃತ್ತಿಜೀವನದಲ್ಲಿ ಅಪಾರ ಅನುಭವವನ್ನು ಹೊಂದಿರುವ ಸಾನಿಯಾ ಮಿರ್ಜಾ ಕ್ರಿಕೆಟ್‌ನಲ್ಲಿ ಮೆಂಟರ್ ಆಗಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ವ್ಯಂಗ್ಯ ಮಾಡುತ್ತಿದ್ದಾರೆ.
ಸಾನಿಯಾ ಮಿರ್ಜಾ ಆರ್ ಸಿಬಿ ತಂಡಕ್ಕೆ ಕೋಚ್ ಆಗಿರುವುದಿಲ್ಲ, ತಂಡದ ಮಾರ್ಗದರ್ಶಕರಾಗಿ ಕೆಲಸ ಮಾಡಲಿದ್ದಾರೆ. ಒತ್ತಡ ನಿವಾರಣೆ, ಒತ್ತಡಗಳನ್ನು ಎದುರಿಸುವ ಬಗ್ಗೆ ಅವರು ತಂಡದ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications