
ಮುಂಬೈನ ಬ್ರಾಬೌರ್ನೆ ಅಂಗಳದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೃಹತ್ ಮೊತ್ತ ಕಲೆ ಹಾಕಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 223 ರನ್ ಗಳಿಸಿದೆ.
ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಡೆಲ್ಲಿ ಆರಂಭಿಕ ಬ್ಯಾಟರ್ ಗಳಾದ ಶಫಾಲಿ ವರ್ಮಾ ಮತ್ತು ಮೆಗ್ ಲ್ಯಾನಿಂಗ್ ಸ್ಮೃತಿ ಮಂಧಾನ ಪಡೆಯ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದರು.
ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಈ ಜೋಡಿ ಆರ್ ಸಿಬಿ ಬೌಲರ್ ಗಳನ್ನು ಕಾಡಿದರು. 14.3 ಓವರ್ ಗಳಲ್ಲಿ ಈ ಜೋಡಿ 162 ರನ್‌ಗಳ ಬೃಹತ್ ಜೊತೆಯಾಟ ಆಡಿದರು. ನಂತರ ಬಂದ ಮರಿಜಾನ್ನೆ ಕಾಪ್ ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದರು.
ಶಫಾಲಿ ವರ್ಮಾ 45 ಎಸೆತಗಳಲ್ಲಿ 10 ಬೌಂಡರಿ 4 ಸಿಕ್ಸರ್ ಸಹಿತ 186.67 ಸ್ಟ್ರೈಕ್‌ರೇಟ್‌ನಲ್ಲಿ 84 ರನ್ ಗಳಿಸಿದರು. ಮೆಗ್ ಲ್ಯಾನಿಂಗ್ 43 ಎಸೆತಗಳ್ಲಲಿ 14 ಬೌಂಡರಿ ಸಹಿತ 167.44 ಸ್ಟ್ರೈಕ್‌ರೇಟ್‌ನಲ್ಲಿ 72 ರನ್ ಗಳಿಸಿದರು.

ಮರಿಜಾನ್ನೆ ಕಾಪ್ ಸ್ಫೋಟಕ ಇನ್ನಿಂಗ್ಸ್
ಶಫಾಲಿ ವರ್ಮಾ ಮತ್ತು ಮೆಗ್ ಲ್ಯಾನಿಂಗ್ ಔಟಾದ ನಂತರ ಬಂದ ಮರಿಜಾನ್ನೆ ಕಾಪ್ ಮತ್ತು ಜೆಮಿಮಾ ರಾಡ್ರಿಗಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸಿದರು.
ಮರಿಜಾನ್ನೆ ಕಾಪ್ 17 ಎಸೆತಗಳಲ್ಲಿ 3 ಬೌಂಡರಿ 3 ಭರ್ಜರಿ ಸಿಕ್ಸರ್ ಸಹಿತ 229.41 ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 39 ರನ್‌ಗಳನ್ನು ಗಳಿಸಿದರು. ಜೆಮಿಮಾ ರಾಡ್ರಿಗಸ್ ಕೂಡ 15 ಎಸೆತಗಳಲ್ಲಿ 3 ಬೌಂಡರಿ ಸಹಾಯದೊಂದಿಗೆ 22 ರನ್ ಗಳಿಸಿದರು. ಆರ್ಸಿಬಿ ಪರವಾಗಿ ಹೀಥರ್ ನೈಟ್ ಮಾತ್ರ 2 ವಿಕೆಟ್ ಪಡೆದರು.

ಉಭಯ ತಂಡಗಳ ಆಡುವ ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ : ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ದಿಶಾ ಕಸತ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಹೀದರ್ ನೈಟ್, ಕನಿಕಾ ಅಹುಜಾ, ಆಶಾ ಶೋಬನಾ, ಪ್ರೀತಿ ಬೋಸ್, ಮೇಗನ್ ಶುಟ್, ರೇಣುಕಾ ಠಾಕೂರ್ ಸಿಂಗ್.
ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾತಂಡ: ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ (ನಾಯಕಿ), ಮರಿಜಾನ್ನೆ ಕಪ್, ಜೆಮಿಮಾ ರಾಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್.