
ಮಹಿಳಾ ಪ್ರೀಮಿಯರ್ ಲೀಗ್‌ನ ಮೂರನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯದಲ್ಲಿ ಸೋತಿರುವ ಗುಜರಾತ್ ಜೈಂಟ್ಸ್ ಯುಪಿ ವಾರಿಯರ್ಸ್ ವಿರುದ್ದ ಗೆಲ್ಲುವ ಲೆಕ್ಕಾಚಾರದಲ್ಲಿದೆ.
ಇಂದು (ಭಾನುವಾರ) ನಡೆಯಲಿರುವ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ಗೆಲುವಿನಿಂದ ಅಭಿಯಾನ ಆರಂಭಿಸುವ ನಿರೀಕ್ಷೆಯಲ್ಲಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಸಂಜೆ 7.30ಕ್ಕೆ ಆರಂಭವಾಗಲಿದೆ.
ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 143 ರನ್‌ಗಳಿಂದ ಸೋತಿರುವ ಗುಜರಾತ್ ಜೈಂಟ್ಸ್ ತಂಡ ಯುಪಿ ವಾರಿಯರ್ಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ತಂಡದ ನಾಯಕಿ ಬೆತ್ ಮೂನಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದು, ಇಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ತಂಡದ ನಾಯಕಿಯೇ ಹೊರಗುಳಿಯುತ್ತಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಬೆತ್ ಮೂನಿ ಅಲಭ್ಯವಾಗಿರುವುದರಿಂದ ಸ್ನೇಹ್ ರಾಣಾ ಗುಜರಾತ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಬೆತ್ ಮೂನಿ ಬದಲಿಗೆ ಆಲ್‌ರೌಂಡರ್ ಸೋಫಿಯಾ ಡಂಕ್ಲಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಗೆಲುವಿನ ಲೆಕ್ಕಾಚಾರದಲ್ಲಿ ಯುಪಿ ವಾರಿಯರ್ಸ್
ಲೀಗ್‌ನ ತಮ್ಮ ಮೊದಲನೇ ಪಂದ್ಯವನ್ನಾಡುತ್ತಿರುವ ಯುಪಿ ವಾರಿಯರ್ಸ್ ಗೆಲುವಿನೊಂದಿಗೆ ಆರಂಭಿಸುವ ಉತ್ಸಾಹದಲ್ಲಿದೆ. ಅಲಿಸ್ಸಾ ಹೀಲಿ ನಾಯಕತ್ವದ ಯುಪಿ ವಾರಿವರ್ಸ್ ಬಲಿಷ್ಠವಾಗಿದೆ. ಅತ್ಯುತ್ತಮ ಆಲ್‌ರೌಂಡರ್ ಗಳನ್ನು ಒಳಗೊಂಡಿದ್ದು ಗುಜರಾತ್ ಜೈಂಟ್ಸ್‌ಗೆ ಸವಾಲಾಕಲು ಸಿದ್ಧವಾಗಿದೆ.
ತಹ್ಲಿಯಾ ಮೆಕ್‌ಗ್ರಾತ್, ಅಲಿಸ್ಸಾ ಹೀಲಿ, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿದ್ದು, ರಾಜೇಶ್ವರ್ ಗಾಯಕ್ವಾಡಿ, ದೇವಿಕಾ ವೈದ್ಯ, ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಅಸ್ತ್ರವಾಗುವ ಸಾಧ್ಯತೆ ಇದೆ.
ಡಿವೈ ಪಾಟೀಲ್ ಅಂಗಳದಲ್ಲಿ ಪಂದ್ಯ ನಡೆಯುತ್ತಿರುವರಿಂದ ಮತ್ತೊಂದು ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ. ಇದೇ ಅಂಗಳದಲ್ಲಿ ಮುಂಬೈ ಇಂಡಿಯನ್ಸ್ 205 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಬ್ಯಾಟಿಂಗ್‌ಗೆ ಹೆಚ್ಚಿನ ಸಹಕಾರ ದೊರೆಯುವುದರಿಂದ ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಉಭಯ ತಂಡಗಳ ಸಂಭಾವ್ಯ ಬಳಗ
ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್/ಸೋಫಿ ಎಕ್ಲೆಸ್ಟೋನ್, ದೇವಿಕಾ ವೈದ್ಯ, ಶಬ್ನಿಮ್ ಇಸ್ಮಾಯಿಲ್, ಎಸ್ ಯಶಸ್ರಿ, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.
ಗುಜರಾತ್ ಜೈಂಟ್ಸ್: ಎಸ್ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಆಶ್ ಗಾರ್ಡ್ನರ್, ಡಿ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್, ಸ್ನೇಹ ರಾಣಾ (ನಾಯಕಿ), ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಮಾನ್ಸಿ ಜೋಶಿ, ಮೋನಿಕಾ ಪಟೇಲ್.