WPL 2023: ಮಂದಾನ ಪಡೆಗೆ ವಿರಾಟ್ ಕೊಹ್ಲಿ ಸ್ಪೂರ್ತಿಯ ನುಡಿ : ಮೊದಲ ಜಯ ದಾಖಲಿಸಿದ ಆರ್‌ಸಿಬಿ

ಮಹಿಳಾ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಗೆಲುವಿನ ನಗೆ ಬೀರಿದೆ. ಬುಧವಾರ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿದೆ.
ಈ ಜಯದ ಮೂಲಕ ಆರ್‌ಸಿಬಿ ಇನ್ನೂ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ ಆರ್‌ಸಿಬಿ ಸತತ 5 ಸೋಲುಗಳ ಸರಪಳಿಯನ್ನು ಕೊನೆಗೂ ಕಳಚುವಲ್ಲಿ ಯಶಸ್ವಿಯಾಯಿತು.
ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ಆರ್ ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿಯ ಸ್ಪೂರ್ತಿಯ ಮಾತುಗಳು ವರದಾನವಾಗಿವೆ. ಯುಪಿ ವಾರಿಯರ್ಸ್ ಪಂದ್ಯಕ್ಕೆ ಮುನ್ನ ವಿರಾಟ್ ಕೊಹ್ಲಿ ಸ್ಮೃತಿ ಮಂದಾನ ಪಡೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದು ಮಂದಾನ ಪಡೆಯ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡಿತು.
ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಆಟಗಾರರಲ್ಲಿ ಬದಲಾವಣೆ ಸ್ಪಷ್ಟವಾಗಿ ಕಂಡುಬಂತು, ಬೌಲಿಂಗ್, ಫೀಲ್ಡಿಂಗ್ ವಿಭಾಗವಂತೂ ಅತ್ಯುತ್ತಮವಾಗಿತ್ತು. ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾದ ಮಂದಾನ ಪಡೆ ಕೊನೆಗೂ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.

ಕೊಹ್ಲಿ ಮಾತುಗಳು ಸ್ಪೂರ್ತಿ ತುಂಬಿದವು ಎಂದ ಹೀದರ್ ನೈಟ್
ಇಂಗ್ಲೆಂಡ್ ತಂಡದ ಮಾಜಿ ನಾಯಕಿ ಹೀದರ್ ನೈಟ್ ಕೊಹ್ಲಿ ಮಾತುಗಳು ತಂಡದ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಆರ್ ಸಿಬಿ ಕ್ಯಾಂಪ್‌ಗೆ ಭೇಟಿ ನೀಡಿದ ಕೊಹ್ಲಿ ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಾರೆ.
ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ಆರ್ ಸಿಬಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಪ್ಲೇ ಆಫ್‌ಗೆ ಪ್ರವೇಶಿಸಬೇಕಾದರೆ ಅವರು ಉಳಿದ ಪಂದ್ಯಗಳಲ್ಲಿ ಜಯ ಸಾಧಿಸುವ ಜೊತೆ ರನ್ ರೇಟ್ ಕೂಡ ಉತ್ತಮಪಡಿಸಿಕೊಳ್ಳಬೇಕಿದೆ.
ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ತಮ್ಮ ಉಳಿದ ಪಂದ್ಯಗಳಲ್ಲಿ ಸೋತು ಆರ್ ಸಿಬಿ ಉಳಿದ ಎರಡೂ ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಇದೆ. ಆರ್ ಸಿಬಿ ಮುಂದಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

ಸಾನಿಯಾ ಮಿರ್ಜಾ ವಿರುದ್ಧ ಆಕ್ರೋಶ
ತಂಡದ ಮೆಂಟರ್ ಆಗಿರುವ ಸಾನಿಯಾ ಮಿರ್ಜಾ ವಿರುದ್ಧ ಈಗ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಬಂದು ತಂಡಕ್ಕೆ ಸ್ಫೂರ್ತಿ ತುಂಬಿದ ಬಳಿಕ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ, ತಂಡದ ಮೆಂಟರ್ ಆಗಿರುವ ಸಾನಿಯಾ ಮಿರ್ಜಾ ಇಷ್ಟು ದಿನ ಏನು ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.
ಆಟಗಾರರಿಗೆ ಒತ್ತಡ ನಿಭಾಯಿಸುವುದು, ಹೆಚ್ಚಿನ ಆತ್ಮವಿಶ್ವಾಸ ತುಂಬುವುದು ಮೆಂಟರ್ ಜವಾಬ್ದಾರಿಯಾಗಿದೆ. ಆರ್ ಸಿಬಿ ಸತತವಾಗಿ 5 ಪಂದ್ಯಗಳಲ್ಲಿ ಸೋತ ಬಳಿಕ ಮೊದಲ ಗೆಲುವು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications