WPL 2024: ಮುಂಬೈ ಇಂಡಿಯನ್ಸ್‌ಗೆ ಸೋಲಿನ ರುಚಿ ತೋರಿಸಿದ ಯುಪಿ ವಾರಿಯರ್ಜ್
ಬುಧವಾರ, ಫೆಬ್ರವರಿ 28ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯಾವಳಿಯ ಆರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ವಿರುದ್ಧ ಯುಪಿ ವಾರಿಯರ್ಜ್ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಈ ಮೂಲಕ ಎರಡನೇ ಆವೃತ್ತಿಯಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡ ತನ್ನ ಮೂರನೇ ಪಂದ್ಯದಲ್ಲಿ ಮೊದಲ ಸೋಲು ಅನುಭವಿಸಿದರೆ, ಇದಕ್ಕೆ ವ್ಯತಿರಿಕ್ತವಾಗಿ ಯುಪಿ ವಾರಿಯರ್ಜ್ ತಂಡ ತನ್ನ ಮೂರನೇ ಪಂದ್ಯದಲ್ಲಿ ಮೊದಲ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಹೇಯ್ಲಿ ಮ್ಯಾಥ್ಯೂಸ್ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 161 ರನ್‌ಗಳನ್ನು ಕಲೆಹಾಕಿತು.
162 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಜ್ ತಂಡ ಕಿರಣ್ ನವಿಗಿರೆ ಅವರ ಸ್ಫೋಟಕ ಅರ್ಧಶತಕದ ಸಹಾಯದಿಂದ 16.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 163 ರನ್ ಗಳಿಸುವ ಮೂಲಕ ಗೆದ್ದು ಬೀಗಿತು.
ಮುಂಬೈ ಇಂಡಿಯನ್ಸ್ ತಂಡದ ಪರ ಆರಂಭಿಕ ಬ್ಯಾಟರ್ ಹೇಯ್ಲಿ ಮ್ಯಾಥ್ಯೂಸ್ 47 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 55 ರನ್ ಬಾರಿಸಿದರೆ, ಯಾಸ್ತಿಕಾ ಭಾಟಿಯಾ 22 ಓವರ್‌ಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 26 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 8 ಓವರ್‌ಗಳಲ್ಲಿ 50 ರನ್‌ಗಳ ಜೊತೆಯಾಟ ನೀಡಿದರು.
ನಂತರ ಬಂದ ಹಂಗಾಮಿ ನಾಯಕಿ ನ್ಯಾಟ್ ಸೀವರ್-ಬ್ರಂಟ್ 19 ರನ್, ಅಮೇಲಿಯಾ ಕೆರ್ 23 ರನ್, ಪೂಜಾ ವಸ್ತ್ರಾಕರ್ 18 ರನ್, ಇಸ್ಸಿ ವಾಂಗ್ 15 ರನ್ ಮತ್ತು ಸಜೀವನ್ ಸಜನಾ 4 ರನ್ ಗಳಿಸಿ ತಂಡದ ಮೊತ್ತ 160ರ ಗಡಿ ದಾಟಿಸಿದರು.

ಬೌಲಿಂಗ್‌ನಲ್ಲಿ ಯುಪಿ ವಾರಿಯರ್ಜ್ ಪರ ಅಂಜಲಿ ಸರ್ವಾಣಿ, ಗ್ರೇಸ್ ಹ್ಯಾರಿಸ್, ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ಚೇಸಿಂಗ್‌ನಲ್ಲಿ ಯುಪಿ ವಾರಿಯರ್ಜ್ ತಂಡದ ಪರ ಆರಂಭಿಕರಾದ ಕಿರಣ್ ನವಿಗಿರೆ ಮತ್ತು ಅಲಿಸ್ಸಾ ಹೀಲಿ ಮೊದಲ ವಿಕೆಟ್‌ಗೆ 9.1 ಓವರ್‌ಗಳಲ್ಲಿ 94 ರನ್‌ಗಳ ಜೊತೆಯಾಟ ನೀಡಿ ಅದ್ಭುತ ಆರಂಭ ಒದಗಿಸಿದರು.
ಕಿರಣ್ ನವಿಗಿರೆ 31 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಮೇತ 57 ರನ್ ಬಾರಿಸಿ ಔಟಾದರೆ, ಅಲಿಸ್ಸಾ ಹೀಲಿ 29 ಎಸೆತಗಳನ್ನು ಎದುರಿಸಿ 5 ಬೌಂಡರಿ ನೆರವಿನಿಂದ 33 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ತಹ್ಲಿಯಾ ಮೆಕ್‌ಗ್ರಾತ್ ಕೇವಲ 1 ರನ್ ಗಳಿಸಿ ಔಟಾದರು.
ಬಳಿಕ ಜೊತೆಗೂಡಿದ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮಾ ಮುರಿಯದ ನಾಲ್ಕನೇ ವಿಕೆಟ್‌ಗೆ 65 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಗಡಿ ತಲುಪಿಸಿದರು. ಗ್ರೇಸ್ ಹ್ಯಾರಿಸ್ ಅಜೇಯ 38 ರನ್ ಗಳಿಸಿದರೆ, ದೀಪ್ತಿ ಶರ್ಮಾ ಅಜೇಯ 27 ರನ್ ಬಾರಿಸಿದರು.
ಬೌಲಿಂಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಇಸ್ಸಿ ವಾಂಗ್ 2 ವಿಕೆಟ್ ಮತ್ತು ಅಮೇಲಿಯಾ ಕೆರ್ ಒಂದು ವಿಕೆಟ್ ಪಡೆದರು. ಆಲ್‌ರೌಂಡ್ ಪ್ರದರ್ಶನ ನೀಡಿದ ಯುಪಿ ವಾರಿಯರ್ಜ್ ತಂಡದ ಗ್ರೇಸ್ ಹ್ಯಾರಿಸ್ ಪಂದ್ಯಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications