WPL 2024: ಮುಂಬೈ ವಿರುದ್ಧ ಗೆದ್ದು ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇಆಫ್ ಪ್ರವೇಶಿಸಿದ ಆರ್‌ಸಿಬಿ
ಮಂಗಳವಾರ, ಮಾರ್ಚ್ 12ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್‌ನ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿತು.
ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸುವ ಮೂಲಕ ಮಹಿಳಾ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಆರ್‌ಸಿಬಿ ತಂಡ ಪ್ಲೇಆಫ್ ಪ್ರವೇಶಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 19 ಓವರ್‌ಗಳಲ್ಲಿ ಕೇವಲ 113 ರನ್‌ಗಳಿಗೆ ಸರ್ವಪತನ ಕಂಡಿತು. ಸಜೀವನ್ ಸಜನಾ 30 ರನ್ ಗಳಿಸಿದರೆ, ಹೇಯ್ಲಿ ಮ್ಯಾಥ್ಯೂಸ್ 26 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು.
114 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ರಿಚಾ ಘೋಷ್ ಮತ್ತು ಎಲ್ಲಿಸ್ ಪೆರ್ರಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ 15 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿ 7 ವಿಕೆಟ್‌ಗಳ ಭರ್ಜರಿ ಗೆಲುವಿಗೆ ಕಾರಣರಾದರು.
ಮುಂಬೈ ಇಂಡಿಯನ್ಸ್ ತಂಡದ ಪರ ಆರಂಭಿಕರಾದ ಸಜೀವನ್ ಸಜನಾ ಮತ್ತು ಹೇಯ್ಲಿ ಮ್ಯಾಥ್ಯೂಸ್ ಮೊದಲ ವಿಕೆಟ್‌ಗೆ 6 ಓವರ್‌ಗಳಲ್ಲಿ 43 ರನ್‌ಗಳ ಜೊತೆಯಾಟ ನೀಡಿದರು.
ನಂತರ ಬಂದ ನ್ಯಾಟ್ ಸೀವರ್-ಬ್ರಂಟ್ 10 ರನ್, ಹರ್ಮನ್‌ಪ್ರೀತ್ ಕೌರ್ , ಅಮೆಲಿಯ ಕೆರ್ 2 ರನ್, ಅಮನ್‌ಜ್ಯೋತ್ ಕೌರ್ 4 ರನ್, ಪೂಜಾ ವಸ್ತ್ರಾಕರ್ 6 ರನ್ ಗಳಿಸಿದರೆ, ಹುಮೈರಾ ಕಾಝಿ 4 ರನ್ ಬಾರಿಸಿದರು.
ಕೊನೆಯಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಪ್ರಿಯಾಂಕ ಬಾಳಾ 19 ರನ್, ಶಬ್ನಿಮ್ ಇಸ್ಮಾಯಿಲ್ 8 ರನ್ ಮತ್ತು ಸೈಕಾ ಇಶಾಕ್ 1 ರನ್ ಗಳಿಸಿ ತಂಡದ ಮೊತ್ತವನ್ನು 110ರ ಗಡಿ ದಾಟಿಸಿದರು.
ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಎಲ್ಲಿಸ್ ಪೆರ್ರಿ 4 ಓವರ್‌ಗಳಲ್ಲಿ 15 ರನ್ ನೀಡಿ 6 ವಿಕೆಟ್ ಪಡೆದರು. ಉಳಿದಂತೆ ಸೋಫಿ ಮೊಲಿನಿಕ್ಸ್, ಶ್ರೇಯಾಂಕಾ ಪಾಟೀಲ್ ಮತ್ತು ಆಶಾ ಶೋಭನಾ ತಲಾ ಒಂದೊಂದೊ ವಿಕೆಟ್ ಪಡೆದರು.

ಇನ್ನು ಆರ್‌ಸಿಬಿ ತಂಡದ ಬ್ಯಾಟಿಂಗ್‌ನಲ್ಲಿ ಆರಭಿಕರಾದ ಸೋಫಿ ಮೊಲಿನಿಕ್ಸ್ ಮತ್ತು ಸ್ಮೃತಿ ಮಂಧಾನ ಉತ್ತಮ ಆರಂಭ ನೀಡಲಿಲ್ಲ. ಈ ಜೋಡಿ 3.2 ಓವರ್‌ಗಳಲ್ಲಿ 22 ರನ್ ಗಳಿಸಿತು. ಸೋಫಿ ಮೊಲಿನಿಕ್ಸ್ 9 ರನ್ ಗಳಿಸಿ ಔಟಾದರೆ, ನಾಯಕಿ ಸ್ಮೃತಿ ಮಂಧಾನ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸೋಫಿ ಡಿವೈನ್ ಕೇವಲ ನಾಲ್ಕು ರನ್ ಗಳಿಸಿ ಪೆವಿಲಿಯನ್ ಸೇರಿದರು.
ಆ ಬಳಿಕ ಜೊತೆಯಾದ ರಿಚಾ ಘೊಷ್ ಮತ್ತು ಎಲ್ಲಿಸ್ ಪೆರ್ರಿ ಮುರಿಯದ ನಾಲ್ಕನೇ ವಿಕೆಟ್‌ಗೆ 76 ರನ್‌ಗಳ ಜೊತೆಯಾಟ ನಿರ್ಮಿಸಿದರು ಮತ್ತು ತಮ್ಮ ತಂಡದ ಗೆಲುವನ್ನು ಖಚಿತಪಡಿಸಿದರು.
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲಿಸ್ ಪೆರ್ರಿ ಪಂದ್ಯಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications