WPL 2024: ಗುಜರಾತ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ಆರ್‌ಸಿಬಿ; ಕುಣಿದು ಕುಪ್ಪಳಿಸಿದ ರಾಯಲ್ ಫ್ಯಾನ್ಸ್!
ಮಂಗಳವಾರ, ಫೆಬ್ರವರಿ 27ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯಾವಳಿಯ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು ಗುಜರಾತ್ ಜೈಂಟ್ಸ್ (ಜಿಜಿ) ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು.

ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 107 ರನ್ ಗಳಿಸಲಷ್ಟೇ ಶಕ್ತವಾಯಿತು.
108 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ಕೇವಲ 12.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿ ಭರ್ಜರಿ 8 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಸತತ ಎರಡನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿತು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡದ ಪರ ಹರ್ಲೀನ್ ಡಿಯೊಲ್ ಮತ್ತು ಬೆತ್ ಮೂನಿ ಉತ್ತಮ ಆರಂಭ ನೀಡಲು ವಿಫಲರಾದರು. ನಾಯಕಿ ಬೆತ್ ಮೂನಿ 8 ರನ್ ಗಳಿಸಿ ಔಟಾದರೆ, ಫೋಬೆ ಲಿಚ್‌ಪೀಲ್ಡ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು 22 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಹರ್ಲೀನ್ ಡಿಯೊಲ್ ರನೌಟ್ ಆದರು. ಕನ್ನಡತಿ ವೇದಾ ಕೃಷ್ಣಮೂರ್ತಿ 9 ರನ್, ಆಶ್ಲೇಗ್ ಗಾರ್ಡ್ನರ್ 7 ರನ್, ದಯಾಳ್ ಹೇಮಲತ ಅಜೇಯ 31 ರನ್ ಗಳಿಸಿ ತಂಡದ ಮೊತ್ತ 100ರ ಗಡಿ ದಾಟಲು ನೆರವಾದರು.
ಉಳಿದಂತೆ ಕ್ಯಾಥರಿನ್ ಬ್ರೈಸ್ 3 ರನ್, ಸ್ನೇಹ್ ರಾಣಾ 12 ರನ್ ಮತ್ತು ತನುಜಾ ಕನ್ವರ್ ಅಜೇಯ 4 ರನ್‌ಗಳ ಕೊಡುಗೆ ನೀಡಿದರು.
ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡದ ಪರ ಸೋಫಿ ಮೊಲಿನೆಕ್ಸ್ 4 ಓವರ್‌ಗಳಲ್ಲಿ 25 ರನ್ ನೀಡಿ 3 ವಿಕೆಟ್ ಪಡೆದರೆ, ರೇಣುಕಾ ಸಿಂಗ್ 4 ಓವರ್‌ಗಳಲ್ಲಿ 14 ರನ್ ನೀಡಿ 2 ವಿಕೆಟ್ ಕಬಳಿಸಿದರು ಮತ್ತು ಜಾರ್ಜಿಯಾ ವೆರ್ಹ್ಯಾಮ್ ಒಂದು ವಿಕೆಟ್ ಪಡೆದರು.

ಚೇಸಿಂಗ್ ಆರಂಭಿಸಿದ ಆರ್‌ಸಿಬಿ ತಂಡದ ಆರಂಭಿಕ ಬ್ಯಾಟರ್‌ಗಳಾದ ನಾಯಕು ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 3.2 ಓವರ್‌ಗಳಲ್ಲಿ 32 ರನ್‌ಗಳ ಜೊತೆಯಾಟ ಒದಗಿಸಿದರು.
ಸೋಫಿ ಡಿವೈನ್ 6 ರನ್ ಗಳಿಸಿ ಆಡುತ್ತಿದ್ದಾಗ ಗಾರ್ಡ್ನರ್ ಬೌಲಿಂಗ್‌ನಲ್ಲಿ ಮೇಘನಾ ಸಿಂಗ್‌ಗೆ ಕ್ಯಾಚ್ ನೀಡಿ ಔಟಾದರು. ನಾಕಯಕಿ ಸ್ಮೃತಿ ಮಂಧಾನ 27 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 43 ರನ್ ಬಾರಿಸಿ ಔಟಾದರೆ, ಸಬ್ಬಿನೇನಿ ಮೇಘನಾ ಅಜೇಯ 36 ರನ್ ಮತ್ತು ಎಲ್ಲಿಸ್ ಪೆರ್ರಿ ಅಜೇಯ 23 ರನ್ ಬಾರಿಸಿ ತಂಡವನ್ನು ಗೆಲುವಿನ ಗಡಿ ತಲುಪಿಸಿದರು.
ಬೌಲಿಂಗ್‌ನಲ್ಲಿ ಗುಜರಾತ್ ಜೈಂಟ್ಸ್ ಪರ ಆಶ್ಲೇಗ್ ಗಾರ್ಡ್ನರ್ ಮತ್ತು ತನುಜಾ ಕನ್ವರ್ ತಲಾ ಒಂದೊಂದು ವಿಕೆಟ್ ಪಡೆದರು. ಇನ್ನು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ರೇಣುಕಾ ಸಿಂಗ್ ಪಂದ್ಯಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications