WPL 2024: ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ಆರ್‌ಸಿಬಿಯ ಆಪತ್ಬಾಂಧವಿ ಎಲ್ಲಿಸ್ ಪೆರ್ರಿ
ಭಾನುವಾರ, ಮಾರ್ಚ್ 17ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2ನೇ ಆವೃತ್ತಿಯ ರೋಚಕ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐತಿಹಾಸಿಕ ಸಾಧನೆ ಮಾಡಿತು ಮತ್ತು 16 ವರ್ಷಗಳ "ಈ ಸಲ ಕಪ್ ನಮ್ದೇ' ಎಂಬ ಅಸಂಖ್ಯ ಅಭಿಮಾನಿಗಳ ಘೋಷ ವಾಕ್ಯವನ್ನು ನಿಜವಾಗಿಸಿತು.

ಆರ್‌ಸಿಬಿ ಮಹಿಳಾ ತಂಡ ತನ್ನ ಎರಡನೇ ಆವೃತ್ತಿಯಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ 16 ವರ್ಷಗಳ ಟ್ರೋಫಿ ಬರವನ್ನು ನೀಗಿಸಿದೆ. ಆರ್‌ಸಿಬಿ ಪುರುಷರ ತಂಡಕ್ಕಿಂತ ಮುನ್ನ ಮಹಿಳಾ ತಂಡ ಟ್ರೋಫಿ ಗೆದ್ದಿರುವುದು ಗಮನಾರ್ಹವಾಗಿದೆ.
ಇನ್ನು 2024ರ ಮಹಿಳಾ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರ್‌ಸಿಬಿ ತಂಡದ ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡರು. ಅತಿ ಹೆಚ್ಚು ವಿಕೆಟ್ ಪಡೆದ ಆರ್‌ಸಿಬಿ ತಂಡದ ಮತ್ತೋರ್ವ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಪರ್ಪಲ್ ಕ್ಯಾಪ್ ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಎಲ್ಲಿಸ್ ಪೆರ್ರಿ ಅಜೇಯ 35 ರನ್‌ಗಳ ತಾಳ್ಮೆಯ ಇನ್ನಿಂಗ್ಸ್ ಆಡಿದರು. ಮೂಲಕ ಪಂದ್ಯಾವಳಿಯಲ್ಲಿ ಆಡಿದ 9 ಪಂದ್ಯಗಳಿಂದ 347 ರನ್‌ಗಳನ್ನು ಗಳಿಸಿದರು.
ಎಲ್ಲಿಸ್ ಪೆರ್ರಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅವರೊಂದಿಗೆ ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿದ್ದರು. ಮೆಗ್ ಲ್ಯಾನಿಂಗ್ ತಮ್ಮ ಹೆಸರಿಗೆ 331 ರನ್ ಹೊಂದಿದರು.
ಆರ್‌ಸಿಬಿ ಅಭಿಮಾನಿಗಳ ಹೊಸ ಕ್ರಶ್ ಎಲ್ಲಿಸ್ ಪೆರ್ರಿ ಈ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಗ್ರ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದರು. ಪಂದ್ಯಾವಳಿಯ ಎಲ್ಲಾ ಪಂದ್ಯಗಳಲ್ಲೂ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಮುಖ ಕೊಡುಗೆ ನೀಡಿದರು.
ಭಾನುವಾರದಂದು ಫೈನಲ್‌ನಲ್ಲಿ 114 ರನ್‌ಗಳನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ಎಲ್ಲಿಸ್ ಪೆರ್ರಿ ಅವರ ಇನ್ನಿಂಗ್ಸ್ ಸಹಾಯವಾಯಿತು ಮತ್ತು 37 ಎಸೆತಗಳಲ್ಲಿ 4 ಬೌಂಡರಿ ಒಳಗೊಂಡಂತೆ ಅಜೇಯ 35 ರನ್ ಬಾರಿಸಿದರು.
ಎಲ್ಲಿಸ್ ಪೆರ್ರಿ ಅವರ ಜೊತೆಗೆ ನಾಯಕಿ ಸ್ಮೃತಿ ಮಂಧಾನ 39 ಎಸೆತಗಳಲ್ಲಿ 31 ರನ್ ಗಳಿಸಿದರು. ಸೋಫಿ ಡಿವೈನ್ ಅವರಿಂದಲೂ ಆರ್‌ಸಿಬಿ ತಂಡ ಉಪಯುಕ್ತ ಕೊಡುಗೆ ಕಂಡುಕೊಂಡಿತು. ಸ್ಮೃತಿ ಮಂಧಾನ ಜೊತೆಗೆ ಬ್ಯಾಟಿಂಗ್ ಆರಂಭಿಸಿದ ಸೋಫಿ ಡಿವೈನ್ 27 ಎಸೆತಗಳಲ್ಲಿ 32 ರನ್ ಗಳಿಸಿದರು.
ಪ್ರಶಸ್ತಿ ಸುತ್ತಿನ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ಪವರ್ ಪ್ಲೇನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಬೃಹತ್ ರನ್‌ಗಳ ಮುನ್ಸೂಚನೆ ನೀಡಿತ್ತು. ಆದರೆ ಪವರ್ ಪ್ಲೇ ಮುಕ್ತಾಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಾಬಲ್ಯ ಸಾಧಿಸಿತು.
ಡೆಲ್ಲಿ ಕ್ಯಾಪಿಟಲ್ಸ್ 64 ರನ್ ಗಳಿಸಿದ್ದಾಗ ಸ್ಫೋಟಕ ಬ್ಯಾಟಿಂಗ್ ಮೂಲಕ 44 ರನ್ ಗಳಿಸಿ ಆಡುತ್ತಿದ್ದ ಶಫಾಲಿ ವರ್ಮಾ ಔಟಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿಕೊಂಡರು ಮತ್ತು ಕೇವಲ 113 ರನ್‌ಗಳಿಗೆ ಆಲೌಟ್ ಆಯಿತು.
ಪ್ರಶಸ್ತಿ ಗೆಲುವಿಗೆ 114 ರನ್‌ಗಳ ಗುರಿ ಪಡೆದ ಆರ್‌ಸಿಬಿ ತಂಡ ಸೋಫಿ ಡಿವೈನ್, ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 19.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.
ಫೈನಲ್ ಪಂದ್ಯದ ಗೆಲುವಿನ ನಂತರ ಮಾತನಾಡಿದ ಎಲ್ಲಿಸ್ ಪೆರ್ರಿ, ಇದು ತಮ್ಮನ್ನು ವಿಭಿನ್ನ ಮಟ್ಟದಲ್ಲಿ ಇರಿಸುತ್ತದೆ ಎಂದು ಹೇಳಿದರು. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ಖುಷಿಪಡಲು ಅನೇಕ ವಿಷಯಗಳಿವೆ. ಇದು ನಮಗೆ ಮತ್ತೊಂದು ಹಂತವಾಗಿದೆ, ತಂಡಕ್ಕೆ ಎಲ್ಲಾ ರೀತಿಯ ಬೆಂಬಲವು ಅಸಾಧಾರಣವಾಗಿದೆ ಮತ್ತು ಇದು ನಂಬಲಾಗದಂತಿದೆ," ಎಂದು ಎಲ್ಲಿಸ್ ಪೆರ್ರಿ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications