WPL 2024 Opening Ceremony: ಮಹಿಳಾ ಟಿ20 ಕ್ರಿಕೆಟ್ ಆರಂಭಕ್ಕೆ ರಂಗು ತುಂಬಿದ ಶಾರುಖ್ ಖಾನ್ & ಸ್ಟಾರ್ಸ್
ಶುಕ್ರವಾರ, ಫೆಬ್ರವರಿ 23ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ 2024ರ ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯುಪಿಎಲ್) 2ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ತಾರೆಗಳು ಭರ್ಜರಿ ಮನರಂಜನಾ ಪ್ರದರ್ಶನದೊಂದಿಗೆ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಗೆ ಅದ್ಧೂರಿ ಚಾಲನೆ ನೀಡಿದರು.
ನಟ ಕಾರ್ತಿಕ್ ಆರ್ಯನ್ ಅವರ ಅದ್ಭುತ ನೃತ್ಯ ಪ್ರದರ್ಶನದೊಂದಿಗೆ ಡಬ್ಲ್ಯುಪಿಎಲ್‌ನ ಉದ್ಘಾಟನಾ ಸಮಾರಂಭವು ಆರಂಭವಾಯಿತು. ಮತ್ತೊಬ್ಬ ಬಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ನಂತರ ತಮ್ಮ ಪ್ರದರ್ಶನ ನೀಡಿದರೆ, ಆ ಬಳಿಕ ಟೈಗರ್ ಶ್ರಾಫ್, ವರುಣ್ ಧವನ್ ಮತ್ತು ಶಾಹಿದ್ ಕಪೂರ್ ಅವರಂತಹ ಸ್ಟಾರ್‌ಗಳು ಅವರನ್ನು ಅನುಸರಿಸಿದರು.

ಅಂತಿಮವಾಗಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ತಮ್ಮ ಅಮೋಘ ನೃತ್ಯ ಪ್ರದರ್ಶನದೊಂದಿಗೆ ನೆರೆದಿದ್ದ 30 ಸಾವಿರಕ್ಕೂ ಅಧಿಕ ಪ್ರೇಕ್ಷಕರಿಗೆ ಮನರಂಜನೆಯ ಊಟ ಬಡಿಸಿದರು. ನಂತರ, ಐದು ತಂಡಗಳ ನಾಯಕಿಯರನ್ನು ವೇದಿಕೆಗೆ ಕರೆದು ಟ್ರೋಫಿಯನ್ನು ಅನಾವರಣಗೊಳಿಸಿದರು.
ಬಾಲಿವುಡ್ ಸೂಪರ್‌ಸ್ಟಾರ್ ತನ್ನ ಅದ್ಭುತವಾದ ನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಮೆರಗು ನೀಡುವ ಮೊದಲು ಸ್ಪೂರ್ತಿದಾಯಕ ಭಾಷಣದೊಂದಿಗೆ ಭವ್ಯವಾದ ಪ್ರವೇಶ ಮಾಡಿದರು ಮತ್ತು 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಚಲನಚಿತ್ರದಿಂದ ಅವರ ಸಿಗ್ನೇಚರ್ ಭಂಗಿಯೊಂದಿಗೆ ಎಲ್ಲರನ್ನೂ ಮೋಡಿ ಮಾಡಿದರು.
ಇದೇ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಮತ್ತು ಕೆಎಸ್‌ಸಿಎ ಅಧ್ಯಕ್ಷ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ
2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ದಕ್ಷಿಣ ಆಫ್ರಿಕಾದ ವೇಗಿ ಶಬ್ನಿಮ್ ಇಸ್ಮಾಯಿಲ್ ಅವರು ಹಾಲಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಕಳೆದ ಋತುವಿನಲ್ಲಿ ಯುಪಿ ವಾರಿಯರ್ಜ್‌ನ ಭಾಗವಾಗಿದ್ದ ಶಬ್ನಿಮ್ ಇಸ್ಮಾಯಿಲ್ ಅವರನ್ನು 2024ರ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ನಡೆದ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 1.2 ಕೋಟಿ ರೂಪಾಯಿಗೆ ಖರೀದಿಸಿತು.
ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಅನ್ನಾಬೆಲ್ ಸದರ್‌ಲ್ಯಾಂಡ್ ಕೂಡ ಪದಾರ್ಪಣೆ ಮಾಡುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಆಡುವ 11ರ ಬಳಗ
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್, ಮರಿಜಾನ್ನೆ ಕಾಪ್, ಅನ್ನಾಬೆಲ್ ಸದರ್ಲ್ಯಾಂಡ್, ಅರುಂಧತಿ ರೆಡ್ಡಿ, ಮಿನ್ನು ಮಣಿ, ತಾನಿಯಾ ಭಾಟಿಯಾ, ರಾಧಾ ಯಾದವ್, ಶಿಖಾ ಪಾಂಡೆ.
ಮುಂಬೈ ಇಂಡಿಯನ್ಸ್: ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹೇಯ್ಲಿ ಮ್ಯಾಥ್ಯೂಸ್, ನ್ಯಾಟ್ ಸ್ಕಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಅಮನ್ಜೋತ್ ಕೌರ್, ಸಜೀವನ್ ಸಜನಾ, ಎಸ್‌ಬಿ ಕೀರ್ತನಾ, ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications