ಅತ್ಯಂತ ದೊಡ್ಡ ಅಭಿಮಾನಿಗಳ ಬೆಂಬಲವನ್ನು ಹೊಂದಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿಯನ್ನು ಕಳೆದ 16 ಪ್ರಯತ್ನಗಳಲ್ಲಿ ಗೆಲ್ಲಲು ವಿಫಲವಾಗಿದೆ.
2023ರಲ್ಲಿ ಆರ್‌ಸಿಬಿ ಫ್ರಾಂಚೈಸಿ ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ತನ್ನ ಭಾಗವಹಿಸುವಿಕೆಯನ್ನು ದೃಢಪಡಿಸಿ ಬಳಿಕ, ವಿಶೇಷವಾಗಿ ಹರಾಜಿನ ನಂತರ ಚೊಚ್ಚಲ ಟ್ರೋಫಿ ಗೆಲ್ಲುವ ಬಗ್ಗೆ ಸಾಕಷ್ಟು ಭರವಸೆ ಇತ್ತು.

ಆದಾಗ್ಯೂ, ಆರ್‌ಸಿಬಿ ಮಹಿಳಾ ತಂಡ ಕಾಗದದ ಮೇಲೆ ಬಲಿಷ್ಠವಾಗಿ ಕಂಡರೂ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು ಮತ್ತು ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.
ಇದೀಗ 2024ರ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಎರಡನೇ ಆವೃತ್ತಿಯ ಮೊದಲು, ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಅವರು ಯಾವುದೇ ಒತ್ತಡವನ್ನು ಹೊಂದಿಲ್ಲ ಮತ್ತು ಪುರುಷರ ತಂಡದೊಂದಿಗೆ ಏನಾಗಿದೆ ಎಂಬುದರ ಕುರಿತು ಯೋಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2023ರಲ್ಲಿ ಆರ್‌ಸಿಬಿ ಮಹಿಳಾ ತಂಡವು ಸಾಕಷ್ಟು ಹೊಸದಾಗಿತ್ತು ಮತ್ತು 2008ರಿಂದ ಟ್ರೋಫಿಗಾಗಿ ಕಾಯುತ್ತಿರುವ ಫ್ರಾಂಚೈಸಿಯ ನಿಷ್ಠಾವಂತ ಅಭಿಮಾನಿಗಳಿಗೆ ಸಾಟಿಯಿಲ್ಲದ ಸಂತೋಷವನ್ನು ನೀಡಲು 2024ರಲ್ಲಿ ಟ್ರೋಫಿಯನ್ನು ಎತ್ತುವ ಗುರಿಯನ್ನು ಹೊಂದಲಾಗಿದೆ ಎಂದು ಸ್ಮೃತಿ ಮಂಧಾನ ಭರವಸೆ ನೀಡಿದ್ದಾರೆ.
"ನಮಗೆ ಆರ್‌ಸಿಬಿ ಮಹಿಳಾ ತಂಡವಾಗಿ, ನಾವೆಲ್ಲರೂ ಅದನ್ನು ಹೊಸದಾಗಿ ಪ್ರಾರಂಭಿಸುತ್ತಿದ್ದೇವೆ. 2008ರಿಂದ ಫ್ರಾಂಚೈಸಿಯಾಗಿ ಆರ್‌ಸಿಬಿ ವಿಷಯದಲ್ಲಿ ಏನಾಯಿತು ಎಂಬುದರ ಕುರಿತು ನಾವು ಯೋಚಿಸುತ್ತಿಲ್ಲ. ಖಂಡಿತವಾಗಿ, ಆರ್‌ಸಿಬಿ ಒಂದು ದೊಡ್ಡ ಫ್ರಾಂಚೈಸಿ ಆಗಿದೆ ಮತ್ತು ಒತ್ತಡಕ್ಕಿಂತ ಹೆಚ್ಚಿನದಾಗಿದೆ".
"ನಾವು ಟ್ರೋಫಿಯನ್ನು ಗೆದ್ದರೆ, ನಿಷ್ಠಾವಂತ ಆರ್‌ಸಿಬಿ ಅಭಿಮಾನಿಗಳು ಯಾವ ರೀತಿಯ ಸಂತೋಷ ಪಡುತ್ತಾರೆ ಎಂಬುದನ್ನು ನಾನು ಎದುರು ನೋಡುತ್ತಿದ್ದೇನೆ," ಎಂದು ಎನ್‌ಡಿಟಿವಿ ಸ್ಪೋರ್ಟ್ಸ್‌ನಲ್ಲಿ ಸ್ಮೃತಿ ಮಂಧಾನಾ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮಹಿಳಾ ಪ್ರೀಮಿಯರ್ ಲೀಗ್ (WPL) ಪ್ರಾರಂಭಿಸಲಾಯಿತು ಮತ್ತು ರಾಷ್ಟ್ರೀಯ ತಂಡಕ್ಕೆ ಹೆಚ್ಚಿನ ಪಂದ್ಯಗಳ ಜೊತೆಗೆ ಪುರುಷರ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನವನ್ನು ಘೋಷಿಸಲಾಯಿತು.
ಇದಲ್ಲದೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈಗ ಮಹಿಳಾ ಕ್ರಿಕೆಟ್ ಅನ್ನು ವಿಭಿನ್ನ ರೀತಿಯಲ್ಲಿ ನೋಡುತ್ತಾರೆ ಎಂದು ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧಾನ ತಿಳಿಸಿದ್ದು, ಇದು ಆಟಗಾರ್ತಿಯರಿಗೆ ಬೆಳೆಯಲು ಸಹಾಯ ಮಾಡಿದೆ.
ಕ್ರಿಕೆಟ್ ಅಭಿಮಾನಿಗಳು ಈಗ ಮಹಿಳಾ ಪಂದ್ಯಗಳಲ್ಲಿ ತಮ್ಮ ಸಮಯವನ್ನು ಹೆಚ್ಚು ಹೂಡಿಕೆ ಮಾಡಿದ್ದಾರೆ. ಅವರು ಕಳೆದ ಎರಡು ವರ್ಷಗಳಿಂದ ಎಲ್ಲಾ ಪ್ರಶಂಸೆ ಮತ್ತು ಟೀಕೆಗಳನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ ಎಂದು ಸ್ಮೃತಿ ಮಂಧಾನ ಹೇಳಿದ್ದಾರೆ.
"ಕಳೆದ 7-8 ವರ್ಷಗಳಲ್ಲಿ (ಮಹಿಳಾ ಕ್ರಿಕೆಟ್‌ನಲ್ಲಿ) ಬದಲಾವಣೆಯು ಭಾರೀ ಪ್ರಮಾಣದಲ್ಲಿದೆ. ಆದರೆ ನಾನು ಹೇಳುವ ದೊಡ್ಡ ಬದಲಾವಣೆಯೆಂದರೆ ಜನರು ಮಹಿಳಾ ಕ್ರಿಕೆಟ್ ಅನ್ನು ನೋಡುತ್ತಿರುವ ರೀತಿ ಮತ್ತು ಅದು ನಿಜವಾಗಿಯೂ ಒಳ್ಳೆಯದಾಗಿದೆ".
"ಅಭಿಮಾನಿಗಳು ನಮ್ಮನ್ನು ಮೆಚ್ಚುತ್ತಿದ್ದಾರೆ ಮತ್ತು ಟೀಕಿಸುತ್ತಿದ್ದಾರೆ, ಅದು ಒಳ್ಳೆಯದು ಏಕೆಂದರೆ ಅವರು ನಮ್ಮನ್ನು ವೀಕ್ಷಿಸುತ್ತಿದ್ದಾರೆ. ಡಬ್ಲ್ಯುಪಿಎಲ್ ಮತ್ತು ಸಮಾನ ವೇತನದ ಹೊರತಾಗಿ, ಮಹಿಳಾ ಕ್ರಿಕೆಟ್ ಅನ್ನು ಜನರು ನೋಡುವ ರೀತಿಯು ಇದು ಒಂದು ದೊಡ್ಡ ಬದಲಾವಣೆಯಾಗಿದೆ ಎಂದು ನಾನು ಭಾವಿಸುತ್ತೇನೆ," ಎಂದು ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಅಭಿಪ್ರಾಯಪಟ್ಟಿದ್ದಾರೆ.