ಭಾನುವಾರ, ಮಾರ್ಚ್ 17ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪ್ರಶಸ್ತಿಯನ್ನು ಗೆದ್ದುಕೊಂಡು, ತಮ್ಮ ಫ್ರಾಂಚೈಸಿಯ ದೀರ್ಘಾವಧಿ ಟ್ರೋಫಿ ಬರವನ್ನು ಕೊನೆಗೊಳಿಸಿತು.
ಆರ್‌ಸಿಬಿ ಪುರುಷರ ತಂಡವು 2008ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಾರಂಭವಾದಾಗಿನಿಂದ ಪ್ರಶಸ್ತಿಯನ್ನು ಗೆದ್ದಿಲ್ಲವಾದರೂ, ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ನಲ್ಲಿಯೇ ಆರ್‌ಸಿಬಿ ಮಹಿಳಾ ತಂಡವು ಅದ್ಭುತ ರೀತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತು.

ಭಾನುವಾರ ನಡೆದ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಸ್ಮೃತಿ ಮಂಧಾನ ನಾಯಕತ್ವದ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಾಗ, ಆರ್‌ಸಿಬಿ ಫ್ರಾಂಚೈಸಿ ಪುರುಷರ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ತಂಡವನ್ನು ಅಭಿನಂದಿಸಿದರು.
"ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಗೆದ್ದ ಆರ್‌ಸಿಬಿ ಮಹಿಳಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರ್‌ಸಿಬಿ ಪುರುಷರ ತಂಡ ಐಪಿಎಲ್ ಗೆದ್ದರೆ ಅದು ಅದ್ಭುತ ಡಬಲ್ ಆಗಲಿದೆ. ಗುಡ್ ಲಕ್," ಉದ್ಯಮಿ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್‌ಸಿಬಿ ಪುರುಷರ ತಂಡ ಐಪಿಎಲ್ ಟ್ರೋಫಿ ಗೆದ್ದರೆ ಈ ಖುಷಿ ಡಬಲ್ ಆಗಲಿದೆ, ಒಳ್ಳೆಯದಾಗಲಿ ಎನ್ನುತ್ತಾ ಆರ್‌ಸಿಬಿ ಪುರುಷರ ತಂಡಕ್ಕೆ ಮದ್ಯದ ದೊರೆ ವಿಜಯ್ ಮಲ್ಯ ಬೇಡಿಕೆ ಇಟ್ಟಿದ್ದಾರೆ.
ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಅವರು ಕಳೆದ ವರ್ಷ ಮಹಿಳಾ ಪ್ರೀಮಿಯರ್ ಲೀಗ್ ಗೆಲ್ಲುವಲ್ಲಿ ವಿಫಲವಾದ ನಂತರ, ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನಿಂದ ದೊಡ್ಡ ಬೆಂಬಲ ಪಡೆದರು. ಇದು ಭಾನುವಾರ ನವದೆಹಲಿಯಲ್ಲಿ ಟ್ರೋಫಿಯನ್ನು ಎತ್ತುವಲ್ಲಿ ಬಹಳ ಪಾತ್ರ ವಹಿಸಿತು ಎಂದು ಫೈನಲ್ ಪಂದ್ಯದ ನಂತರ ತಿಳಿಸಿದರು.

2023ರ ಡಬ್ಲ್ಯುಪಿಎಲ್ ಅಭಿಯಾನವು "ನಮಗೆ ಬಹಳಷ್ಟು ವಿಷಯಗಳನ್ನು ಕಲಿಸಿತು' ಎಂದು ಸ್ಮೃತಿ ಮಂಧಾನ ಹೇಳಿದರು. ಏಕೆಂದರೆ, ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.
ಡಬ್ಲ್ಯುಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ, ಆರ್‌ಸಿಬಿ ಮಹಿಳಾ ತಂಡವು 16 ವರ್ಷಗಳಲ್ಲಿ ತಮ್ಮ ಪುರುಷರ ತಂಡವು ಮಾಡಲಾಗದ್ದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಆದರೆ, ಯಾವಾಗಲೂ ಆರ್‌ಸಿಬಿ ತಂಡವನ್ನು ಬೆಂಬಲಿಸಿದ್ದಕ್ಕಾಗಿ ಫ್ರಾಂಚೈಸಿಯ ನಿಷ್ಠಾವಂತ ಅಭಿಮಾನಿ ಬಳಗಕ್ಕೆ ನಾಯಕಿ ಸ್ಮೃತಿ ಮಂಧಾನ ಕೃತಜ್ಞತೆ ಸಲ್ಲಿಸಿದರು.
ಗೆಲುವಿನ ನಂತರ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಹರ್ಷ ವ್ಯಕ್ತಪಡಿಸಿದರು. ಗೆಲುವಿನ ಸಂಭ್ರಮಾಚರಣೆಗಾಗಿ ಕನ್ನಡದಲ್ಲೇ ಮಾತನಾಡಿದ ಸ್ಮೃತಿ, ಈ ಗೆಲುವನ್ನು ತಂಡದ ನಿಷ್ಠಾವಂತ ಅಭಿಮಾನಿಗಳಿಗೆ ಅರ್ಪಿಸಿದರು ಮತ್ತು ಅಭಿಮಾನಿಗಳ ಬೆಂಬಲವೇ ಕಾರಣವೆಂದು ಹೇಳುವ ಮೂಲಕ "ಈ ಸಲ ಕಪ್ ನಮ್ದೇ' ಬದಲಾಗಿ "ಈ ಸಲ ಕಪ್ ನಮ್ದು' ಎಂದು ಹೇಳಬೇಕು ಎಂದು ತಿಳಿಸಿದರು.
ಸ್ಮೃತಿ ಮಂಧಾನ ತಮ್ಮ ಅದ್ಭುತ ಕ್ರಿಕೆಟ್ ಕೌಶಲ್ಯ ಜೊತೆಗೆ ಮತ್ತು ಮೈದಾನದ ಹೊರಗೆ ಸೊಬಗು ಮತ್ತು ಸುಂದರ ನಗುಮುಖಕ್ಕೆ ಹೆಸರುವಾಸಿಯಾಗಿದ್ದಾರೆ. ಆರ್‌ಸಿಬಿ ತಂಡದ ಟ್ರೋಫಿ ಗೆಲುವು ಸ್ಮೃತಿ ಮಂಧಾನ ಜನಪ್ರಿಯತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.