ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) 2025ರ ಟೂರ್ನಿಗೆ ಸಜ್ಜಾಗುತ್ತಿದೆ. ಆದರೆ, ಕಳೆದ ಬಾರಿ ಆರ್‌ಸಿಬಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿ ಸೋಫಿ ಮೊಲಿನೆಕ್ಸ್ ಗಾಯಗೊಂಡಿದ್ದು, ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದೀಗ ಸೋಫಿ ಮೊಲಿನೆಕ್ಸ್ ಬದಲಿಗೆ ಇಂಗ್ಲೆಂಡ್‌ನ ಆಫ್‌ಸ್ಪಿನ್ನರ್ ಚಾರ್ಲಿ ಡೀನ್ ಆರ್‌ಸಿಬಿ ತಂಡವನ್ನು ಸೇರಿದ್ದಾರೆ. ಈ ಬಗ್ಗೆ ಆರ್‌ಸಿಬಿ ಫ್ರಾಂಚೈಸಿ ಗುರುವಾರ ಅಧಿಕೃತ ಘೋಷಣೆ ಹೊರಡಿಸಿದೆ.
ಆರ್‌ಸಿಬಿ ಡಬ್ಲ್ಯೂಪಿಎಲ್ 2024 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇದಕ್ಕೆ ಸೋಫಿ ಮೊಲಿನೆಕ್ಸ್ ಕೊಡುವೆ ಮರೆಯುವಂತಿಲ್ಲ. ಟೂನಿಯುದ್ಧಕ್ಕೂ ಅದ್ಭುತ ಪ್ರದರ್ಶನ ನೀಡಿದ ಮೊಲಿನೆಕ್ಸ್ ಈ ಬಾರಿ ಆರ್‌ಸಿಬಿ ಪರ ಮತ್ತಷ್ಟು ಮಿಂಚುವ ನಿರೀಕ್ಷೆಯಿತ್ತು. ಆದರೆ, ಮೊಣಕಾಲಿನ ಗಾಯದಿಂದಾಗಿ ಬಳಲುತ್ತಿರುವ ಮೊಲಿನೆಕ್ಸ್ ಡಬ್ಲ್ಯೂಪಿಎಲ್ ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಆಡಲು ಸಜ್ಜಾಗಿರುವ 24 ವರ್ಷದ ಚಾರ್ಲಿ ಡೀನ್ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಈ ಹಿಂದೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರನ್ನು ಯಾವುದೇ ಫ್ರಾಂಚೈಸಿ ಬಿಡ್ ಮಾಡಿರಲಿಲ್ಲ. ಈಗ ಗಾಯಗೊಂಡು ಸೋಫಿ ಮೊಲಿನಿಯಕ್ಸ್ ಹೊರಬಿದ್ದ ಬೆನ್ನಲ್ಲೇ ಚಾರ್ಲಿ ಡೀನ್ ಅವರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ.
ಆಫ್‌ಸ್ಪಿನ್ನರ್ ಚಾರ್ಲಿ ಡೀನ್ ಇಂಗ್ಲೆಂಡ್ ಪರ ಹಲವು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಡೀನ್ ಇದುವರೆಗೆ ಇಂಗ್ಲೆಂಡ್ ಪರ 36 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 6.91 ರ ಆರ್ಥಿಕತೆಯಲ್ಲಿ 46 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ, 12 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಅವರು 135 ರನ್ ಬಾರಿಸಿದ್ದಾರೆ. ಕಳೆದ ವರ್ಷ ಚಾಂಪಿಯನ್ ಆದ ಲಂಡನ್ ಸ್ಪಿರಿಟ್ ತಂಡದ ಭಾಗವಾಗಿದ್ದರು. ಈ ಟೂರ್ನಿಯಲ್ಲಿ ಅವರು 10 ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದರು.
ಬೌಲಿಂಗ್ ಆಲ್‌ರೌಂಡರ್ ಮೊಲಿನಿಕ್ಸ್ ಅವರು ಕೂಡ ಡಬ್ಲ್ಯೂಪಿಎಲ್ 2024 ರಲ್ಲಿ ಆಡಿದ 10 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿ, ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದರು.
ಐಪಿಎಲ್ 2024ರ ಕೋಟ್ಯಾಂತರ ಆರ್‌ಸಿಬಿ ಅಭಿಮಾನಿಗಳ ಕನಸನ್ನು ಆರ್‌ಸಿಬಿ ಮಹಿಳೆಯರು ಈಡೇರಿಸಿದ್ದರು. ಒಮ್ಮೆ ಐಪಿಎಲ್ ಇತಿಹಾಸದಲ್ಲಿ ಕಪ್ ಗೆಲ್ಲದ ಆರ್‌ಸಿಬಿ ಪುರುಷರ ತಂಡ ನಿರಾಸೆ ಕಂಡಿತ್ತು. ಆದರೆ ಆರ್‌ಸಿಬಿ ವನಿತೆಯರು ದಿಟ್ಟ ಹೋರಾಟ ನಡೆಸಿ ಕಪ್ ಅನ್ನು ಮುಡಿಗೇರಿಸಿಕೊಂಡಿದ್ದರು. ಈ ಬಾರಿಯೂ ಆರ್‌ಸಿಬಿ ವನಿತೆಯರು ಗೆಲ್ಲುವ ನಿರೀಕ್ಷೆಯಲ್ಲಿದೆ. ಇದಕ್ಕೆ ಪೂರಕವಾಗಿ ಆರ್‌ಸಿಬಿ ತಂಡವೂ ಸಿದ್ಧವಾಗುತ್ತಿದೆ.
ಸ್ಮೃತಿ ಮಂಧಾನ (ನಾಯಕಿ), ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್‌ಕೀಪರ್), ರೇಣುಕಾ ಸಿಂಗ್, ಜಾರ್ಜಿಯಾ ವೇರ್‌ಹ್ಯಾಮ್, ಸೋಫಿ ಡಿವೈನ್, ಕೇಟ್ ಕ್ರಾಸ್, ಸಬ್ಬಿನೇನಿ ಮೇಘನಾ, ಶ್ರೇಯಾಂಕಾ ಪಾಟೀಲ್, ಆಶಾ ಸೊಭಾನಾ, ಏಕ್ತಾ ಬಿಷ್ತ್, ಕನಿಕಾ ಅಹುಜಾ, ಡೇನಿಯಲ್ ವ್ಯಾಟ್, ಪ್ರೇಮಾ ರಾವತ್, ಜೋಶಿತಾ ವಿಜೆ, ರಾಘವಿ ಬಿಸ್ತ್, ಜಾಗರವಿ ಪವಾರ್, ಚಾರ್ಲಿ ಡೀನ್.