ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೋಮವಾರ ಕಾದಾಟ ನಡೆಸಲಿವೆ. ಉಭಯ ತಂಡಗಳು ಬಲಿಷ್ಠವಾಗಿದ್ದು ಮದಗಜಗಳ ಕಾದಾಟ ರೋಚಕತೆ ಹೆಚ್ಚಿಸಿದೆ. ಈ ವೇಳೆ ಎರಡನೇ ಗೆಲುವನ್ನು ಸಾಧಿಸುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿದೆ.
ವಡೋಧರಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಪಂದ್ಯ ಗೆಲ್ಲುವ ಹಾಟ್ ಫೆವರೀಟ್ ತಂಡ. ಮೊದಲ ಪಂದ್ಯದಲ್ಲಿ ಸ್ಟಾರ್ ಆಟಗಾರ್ತಿಯರು ಹಾಗೂ ಭರವಸೆಯ ಆಟಗಾರ್ತಿಯರು ಪಾರ್ಟಿಗೆ ಬಂದಿದ್ದರಿಂದ ಬೆಂಗಳೂರು ಅಮೋಘ ಜಯ ದಾಖಲಿಸಿತ್ತು. ಇನ್ನು ಮುಂಬೈ ಇಂಡಿಯನ್ಸ್ ವಿರುದ್ದದ ರೋಚಕ ಪಂದ್ಯವನ್ನು ಗೆದ್ದು ಉತ್ಸಾಹದಲ್ಲಿರುವ ಡೆಲ್ಲಿ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ. ಲೀಗ್‌ನ ನಾಲ್ಕನೇ ಪಂದ್ಯದಲ್ಲಿ ಗೆಲುವು ಯಾರ ಪಾಲಾಗುತ್ತದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ಎಡವಿದ್ದ ಆರ್‌ಸಿಬಿ ತಂಡದ ಆರಂಭಿಕ ಆಟಗಾರ್ತಿಯರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ನಾಯಕಿ ಸ್ಮೃತಿ ಮಂಧನಾ ಹಾಗೂ ಡೈನಿ ವೈಟ್ ತಮ್ಮ ನೈಜ ಆಟವನ್ನು ಆಡಿ ತಂಡಕ್ಕೆ ನೆರವಾಗಬೇಕಿದೆ. ಅಂದಾಗ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಇನ್ನು ಆಲ್‌ರೌಂಡರ್ ಎಲ್ಲಿಸಾ ಪೆರ್ರಿ ಅವರ ವಿಶ್ವಾಸ ಮೂಡಿಸಿದ್ದಾರೆ. ಇವರು ಮೊದಲ ಪಂದ್ಯದಲ್ಲಿ 57 ರನ್ ಸಿಡಿಸಿ, ಭರವಸೆ ಮೂಡಿಸಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಾಘ್ವಿ ಬಿಷ್ತಾ, ಕನಿಕಾ ಅಹುಜಾ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದೆ.
ಆರ್‌ಸಿಬಿ ತಂಡದ ವಿಕೆಟ್ ಕೀಪರ್ ರಿಚಾ ಘೋಷ್ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿದೆ. ಇವರು ಗುಜರಾತ್ ವಿರುದ್ಧ ಆಡಿದ ಧಾಟಿಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಗಾಯದ ಸಮಸ್ಯೆ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ತಂಡದ ಅಗ್ರ ಕ್ರಮಾಂಕಿತ ಬೌಲರ್ ರೇಣುಕಾ ಸಿಂಗ್, ವಿಜೆ ಜೋಶಿತಾ, ಪ್ರೇಮಾ ರಾವತ್ ಹಾಗೂ ಆಲ್‌ರೌಂಡರ್ ಆಟಗಾರ್ತಿಯರು ಬಿಗುವಿನ ದಾಳಿ ನಡೆಸಿದರೆ, ಮತ್ತೊಂದು ಗೆಲುವಿನ ಆಸೆ ಫಲಿಸುತ್ತದೆ.

ಮುಂಬೈ ಇಂಡಿಯನ್ಸ್ ವಿರುದ್ದದ ಲೀಗ್ ಹಂತದ ಮೊದಲ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿರುವ ಡೆಲ್ಲಿ, ಎರಡನೇ ಗೆಲುವಿನ ಹುಡುಕಾಟದಲ್ಲಿದೆ. ತಂಡದ ನಾಯಕಿ ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ಲಯಕ್ಕೆ ಮರಳುವ ಅನಿವಾರ್ಯತೆ ಇದೆ. ಇನ್ನು ಶಫಾಲಿ ವರ್ಮಾ ಮೊದಲ ಪಂದ್ಯದಲ್ಲಿ ಆಡಿದ ಧಾಟಿಯಲ್ಲಿ ಬ್ಯಾಟ್ ಮಾಡುವ ವಿಶ್ವಾಸ ಹೊಂದಿದ್ದಾರೆ. ಕನ್ನಡತಿ ನಿಕಿ ಪ್ರಸಾದ್ ಅವರ ಮೇಲೆ ಜವಾಬ್ದಾರಿ ಹೆಚ್ಚಿದೆ. ಉಳಿದಂತೆ ಸ್ಟಾರ್ ಆಟಗಾರ್ತಿಯರ ತಮ್ಮ ಆಟವನ್ನು ಅಚ್ಚುಕಟ್ಟಾಗಿ ಆಡಬೇಕಿದೆ. ಬೌಲಿಂಗ್‌ನಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ ಹಾಗೂ ಶಿಖಾ ಪಾಂಡೆ ಎದುರಾಳಿಗಳನ್ನು ಕಾಡಬಲ್ಲರು. ಇವರಿಗೆ ಉಳಿದ ಬೌಲರ್‌ಗಳು ಉತ್ತಮ ಸಾಥ್ ನೀಡಬೇಕಿದೆ. ಅಂದಾಗ ಎರಡನೇ ಗೆಲುವಿನ ಕನಸು ಸಾಕಾರವಾಗುತ್ತದೆ.