ಮಹಿಳಾ ಪ್ರೀಮಿಯರ್ ಲೀಗ್ (WPL 2026) ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಈ ಹರಾಜಿನಲ್ಲಿ ಯಾರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಲೆಕ್ಕಾಚಾರಗಳು ಆರಂಭವಾಗಿವೆ. ಇನ್ನು ಯಾವ ಆಟಗಾರ್ತಿಯರಿಗೆ ಫ್ರಾಂಚೈಸಿಗಳು ದೊಡ್ಡ ಮೊತ್ತವನ್ನು ನೀಡಬಹುದು ಎಂಬುದು ಕುತೂಹಲ ಮೂಡಿಸಿದೆ. ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಸ್ಥಿರ ಆಟದ ಮೂಲಕ ಅಬ್ಬರಿಸಿರುವ ಆಟಗಾರರು ದೊಡ್ಡ ಮೊತ್ತವನ್ನು ಜೇಬಿಗೆ ಇಳಿಸಿಕೊಳ್ಳುವ ಸಾಧ್ಯತೆ ಇದೆ. ಈ ವೇಳೆ ಎಲ್ಲರ ಕಣ್ಣುಗಳು ಸಹ 5 ವಿದೇಶಿ ಆಟಗಾರ್ತಿಯರ ಮೇಲೆ ನೆಟ್ಟಿದೆ.
ಹರಾಜಿನಲ್ಲಿ ಭಾರತೀಯ ಆಟಗಾರ್ತಿಯರಂತೆ ಫ್ರಾಂಚೈಸಿಗಳು ವಿದೇಶಿ ಆಟಗಾರ್ತಿಯರನ್ನು ಹರಾಜಿನಲ್ಲಿ ಗುರಿಯಾಗಿಸಲಿದೆ. 277 ಆಟಗಾರ್ತಿಯರು ಹರಾಜಿನಲ್ಲಿ ಭಾಗವಹಿಸಲಿದ್ದು, 77 ಸ್ಥಾನಗಳನ್ನು ತುಂಬಲಿದ್ದಾರೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರ್ತಿಗೆ ಮಾಲೀಕರು ರೆಡ್ ಕಾರ್ಪೆಟ್ ಹಾಕಬಹುದಾಗಿದೆ.

ದಕ್ಷಿಣ ಆಫ್ರಿಕಾ ತಂಡದ ನಡಿನ್ ಡಿ ಕ್ಲರ್ಕ್ (Nadine de Klerk) ಅವರು ಹೆಸರು ಹರಾಜು ಅಂಗಳದಲ್ಲಿ ಕೇಳಿಸುತ್ತಿದಂತೆ ಫ್ರಾಂಚೈಸಿಗಳು ಹಣದ ಹೊಳೆಯನ್ನು ಹರಿಸಬಹುದಾಗಿದೆ. ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇವರು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲೂ ಅಬ್ಬರದ ಬ್ಯಾಟಿಂಗ್ ನಡೆಸಿ ಎಲ್ಲರ ಗಮನ ಸೆಳೆದಿದ್ದರು.
ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸ್ಸಾ ಹೀಲಿ (Alyssa Healy) ಅವರಿಗೂ ಸಹ ಮಾಲೀಕರು ಹರಾಜಿನಲ್ಲಿ ಹಣದ ಹೊಳೆಯನ್ನು ಹರಿಸಬಹುದು. ಇವರು ವಿಕೆಟ್ ಕೀಪಿಂಗ್ ಹಾಗೂ ಟಾಪ್ ಆರ್ಡರ್ ಬ್ಯಾಟಿಂಗ್‌ನಲ್ಲಿ ಇವರು ಬಲ ತುಂಬ ಬಲ್ಲ ಆಟಗಾರ್ತಿ. ಅಲ್ಲದೆ ಇವರು ನಾಯಕಿಯಾಗಿ ತಂಡವನ್ನು ಮುನ್ನಡೆಸುವ ಕ್ಷಮತೆಯನ್ನು ಹೊಂದಿದ್ದು, ಇವರು ತಂಡಕ್ಕೆ ಸೇರಿದಲ್ಲಿ ಜಾಕ್‌ಪಾಟ್ ಹೊಡೆದಂತೆ ಆಗುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಿಡುಗಡೆ ಮಾಡಿರುವ ಮೆಗ್ ಲ್ಯಾನಿಂಗ್ (Meg Lanning) ಅವರನ್ನು ಕೊಳ್ಳಲು ಸಹ ಮಾಲೀಕರು ದೊಡ್ಡ ಮೊತ್ತವನ್ನು ಪಾವತಿಸಬಹುದಾಗಿದೆ. ಇವರು ತಂಡಕ್ಕೆ ಸೇರಿಕೊಳ್ಳುವದರಿಂದ ಬ್ಯಾಟಿಂಗ್ ವಿಭಾಗಕ್ಕೆ ಆನೆ ಬಲ ತುಂಬಲಿದೆ. ಇವರು ಈಗಾಗಲೇ ಡಬ್ಲ್ಯೂಪಿಎಲ್‌ನಲ್ಲಿ ನಾಯಕತ್ವ ಮಾಡಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇವರಿಗೆ ಹಣವನ್ನು ಹೂಡಲು ಮಾಲೀಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ನ್ಯೂಜಿಲೆಂಡ್ ತಂಡದ ಅಮೆಲಿಯಾ ಕೆರ್ (Amelia Kerr) ಅವರನ್ನು ಸಹ ಈ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಬಹುದಾದ ಆಟಗಾರ್ತಿ ಎಂದು ಗುರುತಿಸಲಾಗಿದೆ. ಇವರು ಸ್ಪಿನ್ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಸಮತೋಲನ ತರುವ ಕ್ಷಮತೆಯನ್ನು ಹೊಂದಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೊಲ್ವಾರ್ಡ್ಟ್ (Laura Wolvaardt) ಸಹ ಮಾಲೀಕರ ಚಿತ್ತ ಕದ್ದ ಆಟಗಾರ್ತಿ. ಇವರು ಈ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸೊಗಸಾದ ಬ್ಯಾಟಿಂಗ್ ನಡೆಸಿದ್ದರು. ಅಲ್ಲದೆ ಒತ್ತಡವನ್ನು ಮೆಟ್ಟಿನಿಂತು ರನ್‌ಗಳಿಸುವಲ್ಲಿ ಇವರು ನಿಸ್ಸೀಮರು.