WPL 2026: ಗುಜರಾತ್, ಡೆಲ್ಲಿ ಬಿಗ್ ಫೈಟ್: ಗೆದ್ದರೆ ಅಂಕಪಟ್ಟಿಯಲ್ಲಿ ಬಡ್ತಿ
ವಡೋದರಾ: ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ರೋಚಕ ಘಟ್ಟದತ್ತ ಮುಖ ಮಾಡಿದೆ. ಮಂಗಳವಾರ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವುದಲ್ಲದೇ ಮುಂದಿನ ಹಂತಕ್ಕೆ ಹತ್ತಿರವಾಗುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿರುವ 6 ಪಂದ್ಯಗಳಲ್ಲಿ ಜೆಮಿಮಾ ಪಡೆ 3 ಜಯ, 3 ಸೋಲು ಕಂಡಿದ್ದು 6 ಅಂಕ ಕಲೆ ಹಾಕಿದೆ. ಗುಜರಾತ್ ಜೈಂಟ್ಸ್ ಸಹ ಇಷ್ಟೇ ಪಂದ್ಯಗಳಲ್ಲಿ 6 ಅಂಕ ಕಲೆ ಹಾಕಿದೆ. ಈ ಪಂದ್ಯದಲ್ಲಿ ಗೆದ್ದ ತಂಡ 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಲಿದೆ.

ಲೀಗ್ ಹಂತದಲ್ಲಿ ಉಭಯ ತಂಡಗಳು ಈಗಾಗಲೇ ಒಮ್ಮೆ ಕಾದಾಟವನ್ನು ನಡೆಸಿವೆ. ಈ ವೇಳೆ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ 20 ಓವರ್‌ಗಳಲ್ಲಿ 209 ರನ್ ಕಲೆ ಹಾಕಿತ್ತು. ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 105 ರನ್ ಸೇರಿಸಿ ಸೋಲು ಕಂಡಿತ್ತು. ಮಂಗಳವಾರ ನಡೆಯುವ ಪಂದ್ಯದಲ್ಲಿ ಡೆಲ್ಲಿ ಸ್ಥಿರ ಪ್ರದರ್ಶನ ನೀಡಿ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದೆ.
ಡೆಲ್ಲಿ ತಂಡದಲ್ಲೂ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಆರಂಭಿಕ ಆಟಗಾರ್ತಿ ಲಿಜೆಲ್ ಲೀ ಭರ್ಜರಿ ಲಯದಲ್ಲಿದ್ದಾರೆ. ನಾಯಕಿ ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮಾ ಎದುರಾಳಿಗಳನ್ನು ಕಾಡಲು ಸಿದ್ಧರಾಗಿದ್ದಾರೆ. ಇನ್ನು ಲೀಗ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ನಂದಿನಿ ಶರ್ಮಾ ಬೌಲಿಂಗ್‌ನಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆನೆ ಬಲ ತರಲಿದ್ದಾರೆ. ಗುಜರಾತ್ ಜೈಂಟ್ಸ್ ವಿದೇಶಿ ಆಟಗಾರರ ಬ್ಯಾಟಿಂಗ್ ಮೇಲೆ ಹೆಚ್ಚಿನ ಅವಲಂಬನೆ ಆಗಿದೆ. ಸೋಫಿ ಡಿವೈನ್ ಹಾಗೂ ನಾಯಕಿ ಆಶ್ಲೇ ಗಾರ್ಡ್ನರ್ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಕಮಾಲ್ ಪ್ರದರ್ಶನ ನೀಡಬೇಕಿದೆ. ಅಂದಾಗ ಗೆಲುವಿನ ಕನಸು ಫಲಿಸುತ್ತದೆ. ಉಳಿದಂತೆ ಗುಜರಾತ್ ಬೌಲರ್‌ಗಳ ಶಿಸ್ತುಬದ್ಧ ದಾಳಿ ಸಂಘಟಿಸುವ ಅನಿವಾರ್ಯತೆ ಇದೆ.

ಪಿಚ್ ಹೇಗಿರಲಿದೆ?
ವಡೋದರಾದ ಕೋಟಂಬಿ ಕ್ರೀಡಾಂಗಣದ ಪಿಚ್ ನಿಧಾನಗತಿಯಿಂದ ಕೂಡಿದ್ದು, ಬ್ಯಾಟರ್‌ಗಳಿಗೆ ಈ ಪಿಚ್‌ನ ಮೇಲೆ ಆಡುವುದು ಸವಾಲಾಗಿದೆ. ಎರಡನೇ ಇನಿಂಗ್ಸ್ ವೇಳೆ ಇಬ್ಬನಿ ಬೀಳಲಿದ್ದು, ಟಾಸ್ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಗುಜರಾತ್ ಜೈಂಟ್ಸ್ ಸಂಭಾವ್ಯ ತಂಡ
ಬೆತ್ ಮೂನಿ, ಸೋಫಿ ಡಿವೈನ್, ಡ್ಯಾನಿ ವ್ಯಾಟ್-ಹೋಡ್ಜ್, ಅನುಷ್ಕಾ ಶರ್ಮಾ, ಆಶ್ಲೇ ಗಾರ್ಡ್ನರ್ (ನಾಯಕಿ), ಕನಿಕಾ ಅಹುಜಾ, ಭಾರತಿ ಫುಲ್ಮಾಲಿ, ಕಾಶ್ವಿ ಗೌತಮ್, ಹ್ಯಾಪಿ ಕುಮಾರಿ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ
ಶಫಾಲಿ ವರ್ಮಾ, ಲಿಜೆಲ್ ಲೀ, ಜೆಮಿಮಾ ರೋಡ್ರಿಗಸ್ (ನಾಯಕಿ), ಲಾರಾ ವೊಲ್ವಾರ್ಡ್, ಮರಿಜಾನ್ ಕಪ್, ನಿಕಿ ಪ್ರಸಾದ್, ಚಿನೆಲ್ ಹೆನ್ರಿ, ಮಿನ್ನು ಮಣಿ, ಸ್ನೇಹ್ ರಾಣಾ, ಶ್ರೀ ಚರಣಿ, ನಂದಿನಿ
ಈ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಣ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.
ಪಂದ್ಯ ಆರಂಭವಾಗುವ ಸಮಯ ಯಾವಾಗ?
ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಲಿದ್ದು, ಟಾಸ್ ಪಂದ್ಯಕ್ಕೂ ಅರ್ಧಗಂಟೆ ಮುಂಚಿತವಾಗಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications