ನವಿ ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಶನಿವಾರ ನಡೆದ ಪಂದ್ಯದಲ್ಲಿ ಜೆಮಿಮಾ ರೊಡ್ರಿಗಸ್ ಪಡೆ ಮೊದಲ ಸೋಲು ಕಂಡಿದೆ. ಇನ್ನು ಗುಜರಾತ್ ಜೈಂಟ್ಸ್ ತಾನಾಡಿದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಆತ್ಮ ವಿಶ್ವಾಸದಿಂದ ಬೀಗುತ್ತಿದೆ.
ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರ್ತಿಯರು ಇದ್ದಾರೆ. ಈ ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರವನ್ನು ವಹಿಸಲಿದೆ. ಈ ಆವೃತ್ತಿಯಲ್ಲಿ ಈ ಮೈದಾನದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಎರಡು ಬಾರಿ ಗೆದ್ದಿದೆ. ಇನ್ನು ಒಂದು ಬಾರಿ ರನ್ ಚೇಸ್ ಮಾಡಿದ ತಂಡ ಗೆಲುವು ದಾಖಲಿಸಿದೆ. ಹೀಗಾಗಿ ಟಾಸ್ ಮಹತ್ವದ ಪಾತ್ರವನ್ನು ವಹಿಸಿದೆ. ಟಾಸ್ ಗೆದ್ದ ತಂಡ ಫೀಲ್ಡಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆ.

ಮೊದಲ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಶಫಾಲಿ ವರ್ಮಾ, ನಾಯಕಿ ಜೆಮಿಮಾ ರೊಡ್ರಿಗಸ್ ಸಹ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ. ವಿದೇಶಿ ಆಟಗಾರ್ತಿಯರಾದ ಲಿಜೆಲ್ ಲೀ, ಮರಿಜಾನ್ನೆ ಕಪ್, ಲೀ, ಲಾರಾ ವೊಲ್ವಾರ್ಡ್ಟ್ ತಮ್ಮ ಮೇಲೆ ತಂಡ ಇಟ್ಟ ಜವಾಬ್ದಾರಿಗೆ ಪೂರಕವಾಗಿ ಆಟವಾಡಿದಾಗ ಮಾತ್ರ ಗೆಲುವು ಸಾಧ್ಯ. ಇನ್ನು ಬೌಲರ್‌ಗಳು ಸಹ ಬಿಗುವಿನ ದಾಳಿ ನಡೆಸುವ ಅನಿವಾರ್ಯತೆ ಇದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಚಿನೆಲ್ ಹೆನ್ರಿ ಭರ್ಜರಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಇದೇ ಆಟವನ್ನು ಆಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಮೊದಲ ಗೆಲುವಿನ ಕನಸು ನನಸಾಗುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಶಫಾಲಿ ವರ್ಮಾ, ಲಿಜೆಲ್ ಲೀ (ವಿಕೆಟ್ ಕೀಪರ್), ಲಿಜೆಲ್ ಲೀ, ಲಾರಾ ವೊಲ್ವಾರ್ಡ್ಟ್, ಜೆಮಿಮಾ ರೋಡ್ರಿಗಸ್ (ನಾಯಕಿ), ಮರಿಜಾನ್ನೆ ಕಪ್, ನಿಕಿ ಪ್ರಸಾದ್, ಚಿನೆಲ್ ಹೆನ್ರಿ, ಮಿನ್ನು ಮಣಿ, ಸ್ನೇಹ್ ರಾಣಾ, ಶ್ರೀ ಚರಣಿ ಮತ್ತು ನಂದಿನಿ ಶರ್ಮಾ.
ಗುಜರಾತ್ ತಂಡ ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ವೇಳೆ ತಂಡದ ನಾಯಕಿ ಆಶ್ಲೇ ಗಾರ್ಡ್ನರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದೇ ಲಯವನ್ನು ಮುಂದುವರೆಸುವ ವಿಶ್ವಾಸ ಅವರದ್ದಾಗಿದೆ. ಇನ್ನು ಅನುಭವಿ ಬೆತ್ ಮೂನಿ, ಸೋಫಿ ಡಿವೈನ್ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಜಾರ್ಜಿಯಾ ವೇರ್ಹ್ಯಾಮ್ ತಮ್ಮ ಆಲ್‌ರೌಂಡರ್ ಆಟದಿಂದ ಮಿಂಚಬೇಕಿದೆ. ಕಾಶ್ವೀ ಗೌತಮ್, ತನುಜಾ ಕನ್ವರ್, ರಾಜೇಶ್ವರಿ ಗಾಯಕ್ವಾಡ್ ಮತ್ತು ರೇಣುಕಾ ಸಿಂಗ್ ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಿ ವಿಕೆಟ್ ಬೇಟೆ ನಡೆಸಬೇಕಿದೆ.

ಗುಜರಾತ್ ಜೈಂಟ್ಸ್ ಸಂಭಾವ್ಯ ತಂಡ: ಬೆತ್ ಮೂನಿ (ವಿಕೆಟ್ ಕೀಪರ್), ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಭಾರತಿ ಫುಲ್ಮಾಲಿ, ಆಶ್ಲೇ ಗಾರ್ಡ್ನರ್ (ನಾಯಕಿ), ಜಾರ್ಜಿಯಾ ವೇರ್ಹ್ಯಾಮ್, ಕನಿಕಾ ಅಹುಜಾ, ಕಾಶ್ವೀ ಗೌತಮ್, ತನುಜಾ ಕನ್ವರ್, ರಾಜೇಶ್ವರಿ ಗಾಯಕ್ವಾಡ್ ಮತ್ತು ರೇಣುಕಾ ಸಿಂಗ್.
ಡೆಲ್ಲಿ ಹಾಗೂ ಗುಜರಾತ್ ನಡುವಣ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್ ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಪಂದ್ಯ ನವಿ ಮುಂಬೈನಲ್ಲಿ ಸಂಜೆ 7.30ಕ್ಕೆ ಆರಂಭವಾಗಲಿದೆ. ಇದಕ್ಕೂ ಅರ್ಧಗಂಟೆ ಮೊದಲು ಟಾಸ್ ನಡೆಯಲಿದೆ.