ಮಹಿಳಾ ಪ್ರೀಮಿಯರ್ ಲೀಗ್ ಹರಾಜಿಗೆ ಸಿದ್ಧತೆಗಳು ನಡೆದಿವೆ. ಈ ಬಾರಿ ಡಬ್ಲ್ಯೂಪಿಎಲ್‌ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ಟಾರ್ಗೆಟ್ ಮಾಡಲಿದ್ದಾರೆ. ಮಾಜಿ ಚಾಂಪಿಯನ್ ಆರ್‌ಸಿಬಿ ಸಹ ಈ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಗುರಿಯಾಗಿಸಿ ಬಾಜಿ ಕಟ್ಟಲಿದೆ. ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿರುವ ಆರ್‌ಸಿಬಿ ಸ್ಟಾರ್ ಆಟಗಾರರನ್ನು ತಂಡಕ್ಕೆ ಬರಮಾಡಿಕೊಳ್ಳಲು ತಯಾರಿ ನಡೆಸಿದೆ. ಈ ಮೂಲಕ ತಂಡದ ಸಮತೋಲನವನ್ನು ಮತ್ತಷ್ಟು ಉತ್ತಮವಾಗಿಸುವ ಯೋಜನೆ ಆರ್‌ಸಿಬಿ ತಂಡದ್ದಾಗಿದೆ.
ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ ಮತ್ತು ಶ್ರೇಯಾಂಕಾ ಪಾಟೀಲ್ ಸೇರಿದಂತೆ ನಾಲ್ಕು ಪ್ರಮುಖ ಆಟಗಾರ್ತಿಯರನ್ನು ಆರ್‌ಸಿಬಿ ಉಳಿಸಿಕೊಂಡಿದೆ. ಉಳಿದಂತೆ ತಂಡ ಅಳೆದು ತೂಗಿ ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ಖಾಲಿ ಇರುವ ಸ್ಥಾನಗಳಿಗೆ ಆರ್‌ಸಿಬಿ ಹರಾಜಿನಲ್ಲಿ ಆಟಗಾರ್ತಿಯರ ಹುಡುಕಾಟ ನಡೆಸಲಿದೆ. ಈ ವೇಳೆ ಆರ್‌ಸಿಬಿ ಹರಾಜಿನಲ್ಲಿ ಮೂವರು ವಿದೇಶಿ ಆಟಗಾರರನ್ನು ಗುರಿಯಾಗಿಸಿ ಹಣದ ಹೊಳೆಯನ್ನು ಹರಿಸುವ ಸಾಧ್ಯತೆ ಇದೆ. ಹಾಗಿದ್ದಾರೆ ಆರ್‌ಸಿಬಿ ಗುರಿಯಾಗಿಸಲಿರುವ ಆ ಆಟಗಾರ್ತಿಯರು ಯಾರು? ಅವರನ್ನು ತಂಡ ಕೊಂಡು ಕಂಡರೆ ಆಗುವ ಲಾಭ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ವಿಶ್ವದ ಕ್ಲಾಸ್ ಲೆಗ್ ಸ್ಪಿನ್ ಬೌಲರ್ ಅಮೆಲಿಯಾ ಕೆರ್ (Amelia Kerr) ಅವರನ್ನು ಆರ್‌ಸಿಬಿ ಟಾರ್ಗೆಟ್ ಮಾಡುವ ಸಾಧ್ಯತೆ ಇದೆ. ಇವರನ್ನು ಮುಂಬೈ ಇಂಡಿಯನ್ಸ್ ಅವರು ರಿಲೀಸ್ ಮಾಡಿದ್ದಾರೆ. ಇವರು ತಂಡಕ್ಕೆ ಬರುವುದರಿಂದ ತಂಡದ ಬೌಲಿಂಗ್ ವಿಭಾಗ ಬಲಾಢ್ಯವಾಗುತ್ತದೆ. ಅಲ್ಲದೆ ಇವರು ಮಧ್ಯಮ ಕ್ರಮಾಂಕದಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಆಟಗಾರ.
ಆರ್‌ಸಿಬಿ ತನ್ನ ತಂಡದಲ್ಲಿದ್ದ ಟಿ20 ಕ್ರಿಕೆಟ್‌ನ ಅಪಾಯಕಾರಿ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಡ್ಯಾನಿ ವ್ಯಾಟ್-ಹಾಡ್ಜ್ ( Danni Wyatt-Hodge) ಅವರನ್ನು ಹರಾಜಿನಲ್ಲಿ ಟಾರ್ಗೆಟ್ ಮಾಡಲಿದೆ. ಇವರು ಟಾಪ್ ಆರ್ಡರ್‌ನಲ್ಲಿ ಸ್ಮೃತಿ ಮಂಧಾನ ಅವರೊಂದಿಗೆ ಬಿಗ್ ಇನಿಂಗ್ಸ್ ಕಟ್ಟಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇವರು ಪವರ್ ಪ್ಲೇನಲ್ಲಿ ಪವರ್ ಫುಲ್ ಸ್ಟಾರ್ಟ್ ನೀಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇವರನ್ನು ಆರ್‌ಸಿಬಿ ಹರಾಜಿನಲ್ಲಿ ಗುರಿಯಾಗಿಸಲಿದ್ದು, ತನ್ನ ಬ್ಯಾಟಿಂಗ್ ಲೈನ್ ಅಪ್‌ನ್ನು ಮತ್ತಷ್ಟು ಬಲಿಷ್ಠ ಗೊಳಿಸಲಿದೆ.
ಆರ್‌ಸಿಬಿ ತಂಡ ಈ ಬಾರಿಯ ಹಾರಾಜಿನಲ್ಲಿ ಬಾಜಿಕಟ್ಟುವ ಆಟಗಾರ್ತಿಯ ಪಟ್ಟಿಯಲ್ಲಿ ಜಾರ್ಜಿಯಾ ವೇರ್‌ಹ್ಯಾಮ್ (Georgia Wareham) ಒಬ್ಬರು. 2024ರಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವಲ್ಲಿ ಜಾರ್ಜಿಯಾ ವೇರ್‌ಹ್ಯಾಮ್ ಪ್ರಮುಖ ಪಾತ್ರವಹಿಸಿದ್ದರು. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್.
ಮೆಗಾ ಹರಾಜಿಗೆ ಆರ್‌ಸಿಬಿ ತಂಡವು ಸುಮಾರು ₹6.15 ಕೋಟಿ ರೂ. ಹಣದೊಂದಿಗೆ ಅಂಗಳಕ್ಕೆ ಇಳಿಯಲಿದೆ. ಅಲ್ಲದೆ ಹರಾಜಿನ ವೇಳೆ ಆರ್‌ಸಿಬಿ ಒಂದು ರೈಟ್-ಟು-ಮ್ಯಾಚ್ ಕಾರ್ಡ್ ಬಳಸಬಹುದಾಗಿದೆ.