WPL 2026: ಗುಜರಾತ್, ಮುಂಬೈ ನಡುವೆ ಬಿಗ್ ಫೈಟ್, ಪ್ಲೇ ಆಫ್ ಮೇಲೆ ಕಣ್ಣು
ವಡೋದರಾ: ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಫೈನಲ್ ಪ್ರವೇಶಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳಿಂದ ಯುಪಿ ವಾರಿಯರ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಇನ್ನು ಉಳಿದ 2 ಪ್ಲೆ ಆಫ್ ಸ್ಥಾನಗಳ ಮೇಲೆ ಮೂರು ತಂಡಗಳು ಕಣ್ಣು ನೆಟ್ಟಿವೆ. ಹೀಗಾಗಿ ಶುಕ್ರವಾರ ನಡೆಯಲಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಾದಾಟವನ್ನು ನಡೆಸಲಿವೆ. ಈ ಪಂದ್ಯದಲ್ಲಿ ಗುಜರಾತ್ ಗೆದ್ದರೆ ಪ್ಲೇ ಆಫ್ ಪ್ರವೇಶಿಸುತ್ತದೆ. ಒಂದು ವೇಳೆ ಸೋತಲ್ಲಿ ರನ್ ರೇಟ್ ಲೆಕ್ಕಾಚಾರ ಆರಂಭವಾಗುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ಸಹ ಈ ಪಂದ್ಯವನ್ನು ಸೂಕ್ಷ್ಮವಾಗಿ ನೋಡುತ್ತಿದೆ. ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಗೆದ್ದಲ್ಲಿ ಇದರ ಲಾಭವನ್ನು ಪಡೆಯುವ ಇರಾದೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ಹೊಂದಿದೆ. ಇನ್ನು ಮುಂಬೈ ಇಂಡಿಯನ್ಸ್ ಜಯ ಸಾಧಿಸಿದರೆ, ಡೆಲ್ಲಿ ಲೀಗ್ ಹಂತದ ಕೊನೆಯ ಪಂದ್ಯವನ್ನು ಭಾರೀ ಅಂತರದಲ್ಲಿ ಗೆಲ್ಲುವ ಅನಿವಾರ್ಯತೆ ಇದೆ.

ಮುಂಬೈ, ಗುಜರಾತ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಲೀಗ್ ಹಂತದಲ್ಲಿ ಉಭಯ ತಂಡಗಳು ಈ ಮೊದಲೇ ಕಾದಾಟವನ್ನು ನಡೆಸಿದ್ದವು. ಗುಜರಾತ್ ಜೈಂಟ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 192 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ಮುಂಬೈ 3 ವಿಕೆಟ್ ಕಳೆದುಕೊಂಡು 6 ಎಸೆತ ಬಾಕಿ ಇರುವಂತೆ ಜಯ ಸಾಧಿಸಿತ್ತು. ಉಭಯ ತಂಡಗಳಿಗೂ ಇದು ಲೀಗ್ ಹಂತದ ಕೊನೆಯ ಪಂದ್ಯವಾಗಿದೆ. ಗುಜರಾತ್ ಹಿಂದಿನ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ. ಮುಂಬೈ ಶತಾಯ ಗತಾಯ ಪಂದ್ಯ ಗೆದ್ದು ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಹೊಂದಿದೆ.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಹರ್ಮನ್ ಪಡೆ ಸ್ಥಿರ ಆಟದ ಪ್ರದರ್ಶನ ನೀಡಿ ಜಯ ಸಾಧಿಸುವ ಪ್ಲ್ಯಾನ್ ಹಾಕಿಕೊಂಡಿದೆ. ಇನ್ನು ಗುಜರಾತ್ ಈ ಪಂದ್ಯದಲ್ಲಿ ಜಯದ ನಗೆ ಬೀರಿ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸು ಆಸೆಯನ್ನು ಹೊಂದಿದೆ.

ಗುಜರಾತ್ ಜೈಂಟ್ಸ್ ಆಡುವ ಹನ್ನೊಂದರ ಬಳಗ ಹೇಗಿರಲಿದೆ?
ಬೆತ್ ಮೂನಿ, ಡ್ಯಾನಿ ವ್ಯಾಟ್-ಹಾಡ್ಜ್, ಅನುಷ್ಕಾ ಶರ್ಮಾ, ಸೋಫಿ ಡಿವೈನ್, ಆಶ್ಲೀ ಗಾರ್ಡ್ನರ್, ಭಾರ್ತಿ ಫುಲ್ಮಾಲಿ, ಕನಿಕಾ ಅಹುಜಾ, ಕಾಶ್ವಿ ಗೌತಮ್, ತನುಜಾ ಕನ್ವರ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕವಾಡ್.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾರಿಗೆಲ್ಲಾ ಅವಕಾಶ?
ಹೇಲಿ ಮ್ಯಾಥ್ಯೂಸ್, ಸಜೀವನ್ ಸಜನಾ, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಸಂಸ್ಕೃತಿ ಗುಪ್ತಾ, ಪೂನಂ ಖೆಮ್ನರ್, ರಾಹಿಲಾ ಫಿರ್ದೌಸ್, ವೈಷ್ಣವಿ ಶರ್ಮಾ, ಶಬ್ನಿಮ್ ಇಸ್ಮಾಯಿಲ್.
ಪಿಚ್ ಹೇಗಿರಲಿದೆ?
ವಡೋದರಾದ ಪಿಚ್ ನಿಧಾನಗತಿಯಲ್ಲಿದೆ ಎಂದು ತಿಳಿದು ಬಂದಿದೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಕಳೆದ ಎರಡು ಪಂದ್ಯಗಳಲ್ಲಿ 170 ರ ಗಡಿಯನ್ನು ದಾಟಿದೆ. ರನ್ ಹೊಳೆಯನ್ನು ಈ ಮೈದಾನದಲ್ಲಿ ನಿರೀಕ್ಷಿಸಬಹುದಾಗಿದೆ. ಇಬ್ಬನಿ ಪಂದ್ಯಕ್ಕೆ ಕಾಟ ನೀಡುವ ಸಾಧ್ಯತೆ ಇದೆ. ಹೀಗಾಗಿ ಟಾಸ್ ಮಹತ್ವದ ಪಾತ್ರವನ್ನು ವಹಿಸಲಿದೆ.
ಪಂದ್ಯವನ್ನು ವೀಕ್ಷಿಸುವುದು ಎಲ್ಲಿ?
ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ 19ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ.
ಪಂದ್ಯ ಆರಂಭವಾಗುವ ಸಮಯ ಯಾವಾಗ?
ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಲಿದೆ. ಇನ್ನು ಪಂದ್ಯ ಆರಂಭಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications