WPL 2026: ನಾಡಿನ್ ಡಿ ಕ್ಲರ್ಕ್ ಮಿಂಚು: RCB ಗೆಲುವಿಗೆ 155 ರನ್ ಗುರಿ ನೀಡಿದ ಮುಂಬೈ
ನವಿ ಮುಂಬೈ: ಭರವಸೆಯ ಆಟಗಾರ್ತಿ ಸಜೀವನ್ ಸಜನಾ ಹಾಗೂ ನಿಕೋಲಾ ಕ್ಯಾರಿ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 155 ರನ್‌ಗಳ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಭರವಸೆಯ ಬ್ಯಾಟರ್ ಅಮೆಲಿಯಾ ಕೆರ್ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಲಾರೆನ್ ಬೆಲ್ ಎಸೆದ ಔಟ್ ಸೈಡ್ ಆಫ್ ಸ್ಟಂಪ್ ಚೆಂಡಿನಲ್ಲಿ ಬಿಗ್ ಹಿಟ್ ಬಾರಿಸಲು ಮುಂದಾದ ಅಮೆಲಿಯಾ ಕೆರ್ ಎಕ್ಸ್‌ಟ್ರಾ ಕವರ್‌ನಲ್ಲಿದ್ದ ಅರುಂಧತಿ ರೆಡ್ಡಿ ಹಿಡಿದ ಕ್ಯಾಚ್‌ಗೆ ಬಲಿಯಾದರು. ಈ ವೇಳೆಗೆ ಮುಂಬೈ ತಂಡ 21 ರನ್ ಕಲೆ ಹಾಕಿತ್ತು.

ಭರವಸೆಯ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್ ಅವರು ನಾಡಿನ್ ಡಿ ಕ್ಲರ್ಕ್ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಮುಂದಾಗಿ ಸ್ಟಂಪ್ ಔಟ್ ಆದರು. ಯುವ ಆಟಗಾರ್ತಿ ಜಿ ಕಮಲಿನಿ ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ಪ್ರದರ್ಶಿಸಿದರು. ಇವರು 28 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 32 ರನ್ ಸೇರಿಸಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಎಸೆದ ಬೌಲಿಂಗ್‌ನಲ್ಲಿ ಬೋಲ್ಡ್ ಆದರು.
ನಾಯಕಿ ಹರ್ಮನ್ ಪ್ರೀತ್ ಕೌರ್ ಸಹ ನಾಡಿನ್ ಡಿ ಕ್ಲರ್ಕ್ ಅವರ ಎಸೆತವನ್ನು ಗುರುತಿಸುವಲ್ಲಿ ವಿಫಲರಾಗಿ ವಿಕೆಟ್ ಕೀಪರ್ ರಿಚಾ ಘೋಷ್ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು. ಇವರು 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 20 ರನ್ ಸಿಡಿಸಿ ಔಟ್ ಆದರು.
31 ವರ್ಷದ ಸಜೀವನ್ ಸಜನಾ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದರು. ಇವರು ಐದನೇ ವಿಕೆಟ್‌ಗೆ ನಿಕೋಲಾ ಕ್ಯಾರಿ ಜೊತೆಗೂಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿ ಅಬ್ಬರಿಸಿತು. ಈ ಜೋಡಿ 49 ಎಸೆತಗಳಲ್ಲಿ 82 ರನ್ ಸೇರಿಸಿತು. ಈ ವೇಳೆ ಸಜೀವನ್ ಸಜನಾ 25 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿ ನಾಡಿನ್ ಡಿ ಕ್ಲರ್ಕ್ ತೋಡಿದ ಖೆಡ್ಡಾಗೆ ಬಲಿಯಾದರು.
ಎರಡು ಜೀವದಾನ
ಪಂದ್ಯದಲ್ಲಿ ಆರ್‌ಸಿಬಿ ಎರಡು ಕ್ಯಾಚ್‌ಗಳನ್ನು ಬಿಟ್ಟಿದ್ದು ದುಬಾರಿ ಆಯಿತು. ರಾಧಾ ಯಾದವ್ ಅವರ ಎಸೆತವನ್ನು ಸಜೀವನ್ ಸಜನಾ ಮಿಡ್‌ವಿಕೆಟ್‌ಗೆ ಬಾರಿಸಿದರು. ಈ ಕ್ಷೇತ್ರದಲ್ಲಿ ಫೀಲ್ಡ್ ಮಾಡುತ್ತಿದ್ದ ಹೇಮಲತಾ ಸುಲಭ ಕ್ಯಾಚ್ ಕೈ ಬಿಟ್ಟರು. ಇನ್ನು ನಂತರದ ಓವರ್‌ನಲ್ಲೂ ಸಜನಾ, ಅರುಂಧತಿ ರೆಡ್ಡಿ ಅವರ ಎಸೆತದಲ್ಲಿ ಮಿಡ್ ಆಫ್‌ನಲ್ಲಿ ನಿಂತಿದ್ದ ಆಟಗಾರ್ತಿ ಸುಲಭ ಕ್ಯಾಚ್ ಕೈ ಚೆಲ್ಲಿದರು.
ನಾಡಿನ್ ಡಿ ಕ್ಲರ್ಕ್ ಅಬ್ಬರ
ಆರ್‌ಸಿಬಿ ತಂಡದ ವೇಗಿ ನಾಡಿನ್ ಡಿ ಕ್ಲರ್ಕ್ ಬಿಗುವಿನ ದಾಳಿ ನಡೆಸಿದರು. ಇವರು 4 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿ 4 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications