WPL 2026: ಸ್ಮೃತಿ ಮಂಧಾನ vs ಹರ್ಮನ್ ಪ್ರೀತ್ ಕೌರ್: ಮೊದಲು ಗೆಲುವು ಯಾರಿಗೆ?
ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ಗೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರದಿಂದ ಭಾರತದಲ್ಲಿ ಮಹಿಳಾ ಲೀಗ್ ಕಲರವ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಒಟ್ಟು 5 ತಂಡಗಳು ಪ್ರಶಸ್ತಿಗಾಗಿ ಕಾದಾಟವನ್ನು ನಡೆಸಲಿವೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸಲಿದ್ದು ಅಭಿಮಾನಿಗಳ ಗಮನ ಸೆಳೆದಿದೆ. ಈಗಾಗಲೇ ಉಭಯ ತಂಡಗಳು ಲೀಗ್‌ನಲ್ಲಿ ಒಟ್ಟು 7 ಬಾರಿ ಮುಖಾಮುಖಿ ಆಗಿದ್ದು, ಮುಂಬೈ 4, ಆರ್‌ಸಿಬಿ 3 ಪಂದ್ಯಗಳಲ್ಲಿ ಜಯ ಸಾಧಿಸಿವೆ. ಡಿವೈ ಪಾಟೀಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರವನ್ನು ವಹಿಸಲಿದೆ. ಉಭಯ ತಂಡಗಳ ನಡುವಣ ಕಾದಾಟದಲ್ಲಿ 199 ರನ್ ಗರಿಷ್ಠ ಮೊತ್ತವಾಗಿದೆ. ಇನ್ನು 113 ರನ್ ಕನಿಷ್ಠ ಮೊತ್ತವಾಗಿದೆ.

ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಈ ಬಾರಿ ಸ್ಮೃತಿ ಮಂಧಾನ ಜೋತೆಗೆ ಜಾರ್ಜಿಯಾ ವೋಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇದರಿಂದ ತಂಡಕ್ಕೆ ಬಲಗೈ ಹಾಗೂ ಎಡಗೈ ಬ್ಯಾಟರ್‌ಗಳ ಸಂಯೋಜನೆ ಸಿಗಲಿದೆ. ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಅವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಫಿನಿಷರ್‌ಗಳ ದಂಡು..
ಆರ್‌ಸಿಬಿ ತಂಡದಲ್ಲಿ ಸಾಲು ಸಾಲು ಮ್ಯಾಚ್ ಫಿನಿಷರ್‌ಗಳು ಇದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್, ನಡಿನ್ ಡಿ ಕ್ಲರ್ಕ್, ಗ್ರೇಸ್ ಹ್ಯಾರಿಸ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಧಾರವಾಗಬಲ್ಲ ಆಟಗಾರ್ತಿ. ವೇಗದ ಬೌಲರ್‌ಗಳಾಗಿ ಪೂಜಾ ವಸ್ತ್ರಾಕರ್ ಹಾಗೂ ಅರುಂಧತಿ ರೆಡ್ಡಿ ಪವರ್‌ಪ್ಲೇನಲ್ಲಿ ಬಿಗುವಿನ ದಾಳಿ ನಡೆಸುವ ಅನಿವಾರ್ಯತೆ ಇದೆ. ಆರ್‌ಸಿಬಿ ತಂಡದಲ್ಲಿ ಖ್ಯಾತ ಸ್ಪಿನ್ ಬೌಲರ್‌ಗಳು ಇದ್ದಾರೆ. ಕನ್ನಡತಿ ಶ್ರೇಯಾಂಕ ಪಾಟೀಲ್, ರಾಧಾ ಯಾಧವ್, ಲಾರೆನ್ ಬೆಲ್ ತಮ್ಮ ಪಿರ್ಕಿ ಮೂಲಕ ಎದುರಾಳಿಗಳನ್ನು ಕಾಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.

ಆರ್‌ಸಿಬಿ ಸಂಭಾವ್ಯ ತಂಡ: ಸ್ಮೃತಿ ಮಂಧಾನ (ನಾಯಕಿ), ಜಾರ್ಜಿಯಾ ವೋಲ್, ರಿಚಾ ಘೋಷ್ (ವಿಕೆಟ್ ಕೀಪರ್), ದಯಾಳನ್ ಹೇಮಲತಾ, ಗ್ರೇಸ್ ಹ್ಯಾರಿಸ್, ನಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಶ್ರೇಯಾಂಕ ಪಾಟೀಲ್, ಅರುಂಧತಿ ರೆಡ್ಡಿ, ಲಾರೆನ್ ಬೆಲ್, ರಾಧಾ ಯಾದವ್.
ಗೆಲುವಿನ ನಿರೀಕ್ಷೆ
ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ಆರಂಭವನ್ನು ಮಾಡುವ ಕನಸು ಕಾಣುತ್ತಿದೆ. ಈ ತಂಡದಲ್ಲೂ ಸಾಲು ಸಾಲು ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಹೇಯ್ಲಿ ಮ್ಯಾಥ್ಯೂಸ್, ನ್ಯಾಟ್ ಸೈವರ್-ಬ್ರಂಟ್, ಅಮೆಲಿಯಾ ಕೆರ್ ತಮ್ಮ ಧಮಾಕೆದಾರ್ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಧಾರವಾಗಬಲ್ಲ ಆಟಗಾರ್ತಿಯಾಗಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಹರ್ಮನ್ ಪ್ರೀತ್ ಕೌರ್ ತಂಡಕ್ಕೆ ಆಧಾರವಾಗಬಲ್ಲ ಪ್ಲೇಯರ್. ಆಲ್‌ರೌಂಡರ್ ಅಮನ್‌ಜೋತ್ ಕೌರ್ ಸ್ಥಿರ ಪ್ರದರ್ಶನ ನೀಡಬೇಕಿದೆ. ಉಳಿದಂತೆ ತಂಡದ ಸ್ಟಾರ್ ಬೌಲರ್‌ಗಳು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬೌಲಿಂಗ್ ನಡೆಸಿದರೆ ಗೆಲುವಿನ ನಗೆಯನ್ನು ಬೀರಬಹುದಾಗಿದೆ.
ಮುಂಬೈ ಸಂಭಾವ್ಯ ತಂಡ: ಹೇಯ್ಲಿ ಮ್ಯಾಥ್ಯೂಸ್, ನ್ಯಾಟ್ ಸೈವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮಾಂಜೋತ್ ಕೌರ್, ಅಮೆಲಿಯಾ ಕೆರ್, ಜಿ ಕಮಲಿನಿ (ವಿಕೆಟ್ ಕೀಪರ್), ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್, ಸಜೀವನ್ ಸಜನಾ, ಸಂಸ್ಕೃತಿ ಗುಪ್ತಾ, ಪೂನಂ ಖೆಮ್ನಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications