WPL 2026: ಗೆಲುವಿನ ಒತ್ತಡದಲ್ಲಿ ಹರ್ಮನ್ ಪಡೆ, ಆರ್‌ಸಿಬಿ ಗೆದ್ದರೆ ಫೈನಲ್‌ಗೆ
ವಡೋದಾರ: ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ ಹಂತದಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಡೆ ಅಬ್ಬರಿಸಿ ಜಯ ಸಾಧಿಸುವಲ್ಲಿ ಸಫಲರಾದರೆ, ಲೀಗ್‌ನಲ್ಲಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಹೊಂದಲಿದೆ. ಇನ್ನು ಮುಂಬೈ ಇಂಡಿಯನ್ಸ್ ಪಾಲಿಗೂ ಇದು ಮಾಡು ಇಲ್ಲವೆ ಮಡಿ ಪಂದ್ಯದ ರೀತಿ ಆಗಿದೆ. ಈ ಪಂದ್ಯದಲ್ಲಿ ಮುಂಬೈ ಗೆದ್ದರೆ ಮುಂದಿನ ಹಂತದ ಕನಸು ಫಲಿಸುತ್ತದೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಸತತ ಮೂರು ಸೋಲುಗಳನ್ನು ಕಂಡಿದ್ದು ಗೆಲುವಿನ ಹಳಿಗೆ ಮರಳಲು ಬೇಕಾದ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಆರ್‌ಸಿಬಿ ಕಳೆದ ಪಂದ್ಯದಲ್ಲಿ ಸೋತಿದ್ದು, ಲೀಗ್ ಹಂತದಲ್ಲಿ ಮತ್ತೊಂದು ಜಯ ಸಾಧಿಸಿ ಡೈರೆಕ್ಟ್ ಫೈನಲ್‌ಗೆ ಏರುವ ಕನಸು ಕಾಣುತ್ತಿದೆ. ಆರ್‌ಸಿಬಿ ಆಡಿರುವ 6 ಪಂದ್ಯಗಳಲ್ಲಿ 5 ಜಯ, 1 ಸೋಲನ್ನು ಕಂಡಿದ್ದು 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿದೆ.

ಆರ್‌ಸಿಬಿ ತಂಡ ತನ್ನ ಲೀಗ್ ಹಂತದ ಏಳನೇ ಪಂದ್ಯದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಾಡಿದ ತಪ್ಪನ್ನು ಮೆಟ್ಟಿನಿಂತು ಆಟವನ್ನು ಆಡಿದರೆ ಗೆಲುವಿನ ನಗೆ ಬೀರಬಹುದಾಗಿದೆ. ಆರಂಭದಲ್ಲಿ ಸ್ಮೃತಿ ಮಂಧಾನ ಹಾಗೂ ಗ್ರೇಸ್ ಹ್ಯಾರಿಸ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್, ರಿಚಾ ಘೋಷ್ ಅವರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಇನ್ನು ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಜಯದಲ್ಲಿ ಮಿಂಚುವ ಅನಿವಾರ್ಯತೆ ಇದೆ.
ಪಿಚ್ ಹೇಗಿದೆ?
ವಡೋದರಾದ ಕೋಟಂಬಿ ಕ್ರೀಡಾಂಗಣದ ಪಿಚ್ ಕಡಿಮೆ ಬೌನ್ಸ್ ಹೊಂದಿದೆ. ಈ ಪಿಚ್ ಬೌಲರ್‌ಗಳಿಗೆ ಕೊಂಚ ಅನುಕೂಲ ನೀಡುತ್ತಿದೆ. ಸ್ಪಿನ್ ಬೌಲರ್‌ಗಳಿಗೂ ಪಿಚ್ ಸಹಾಯ ಮಾಡಬಹುದು. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡುವುದು ಒಳ್ಳೆಯ ನಿರ್ಧಾರವಾಗಬಹುದು ಎಂದು ಅಂದಾಜಿಸಲಾಗಿದೆ.

ಹೇಗಿರಲಿದೆ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್?
ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ, ಜಾರ್ಜಿಯಾ ವೋಲ್, ಗೌತಮಿ ನಾಯಕ್, ರಿಚಾ ಘೋಷ್, ರಾಧಾ ಯಾದವ್, ನಾಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್/ಸಾಯಲಿ ಸತ್ಗರೆ, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ಲಾರೆನ್ ಬೆಲ್
ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆ ಕಾಣಬಹುದಾ?
ಎಸ್ ಸಜನಾ, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್/ನಿಕೋಲಾ ಕೇರಿ, ಅಮಾಂಜೋತ್ ಕೌರ್, ಸಂಸ್ಕೃತಿ ಗುಪ್ತಾ, ಪೂನಂ ಖೆಮ್ನಾರ್, ರಾಹಿಲಾ ಫಿರ್ದೌಸ್, ಶಬ್ನಿಮ್ ಇಸ್ಮಾಯಿಲ್, ವೈಷ್ಣವಿ ಶರ್ಮಾ.
ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯವನ್ನು ನೋಡುವುದು ಎಲ್ಲಿ?
ಮಹಿಳಾ ಪ್ರೀಮಿಯರ್ ಲೀಗ್‌ನ 16ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲೂ ವೀಕ್ಷಿಸಬಹುದಾಗಿದೆ.
ಪಂದ್ಯ ನಡೆಯುವ ಸಮಯ ಯಾವಾಗ?
ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದ್ದು, ಪಂದ್ಯದ ಅರ್ಧ ಗಂಟೆ ಮೊದಲು ಟಾಸ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications