WPL 2026:ಯುಪಿ, ಗುಜರಾತ್ ನಡುವೆ ಬಿಗ್ ಫೈಟ್: ಇಂದು ಗೆದ್ದರೆ ಅಂಕಪಟ್ಟಿಯಲ್ಲಿ ಬಡ್ತಿ
ವಡೋದರಾ: ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ರೋಚಕ ಘಟ್ಟದತ್ತ ಮುಖ ಮಾಡಿದೆ. ಈಗಾಗಲೇ ಎಲ್ಲ ತಂಡಗಳು 5 ಪಂದ್ಯಗಳನ್ನು ಆಡಿವೆ. ಇನ್ನು ಪ್ಲೇ ಆಫ್ ಲೆಕ್ಕಾಚಾರ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಆರ್‌ಸಿಬಿ ಆಡಿರುವ 5 ಪಂದ್ಯಗಳಲ್ಲಿ ಜಯ ಸಾಧಿಸಿ ಪ್ಲೇ ಆಫ್ ಪ್ರವೇಶಿಸಿದೆ. ಮುಂದಿನ ಹಂತದ ಮೇಲೆ ಚಿತ್ತ ನೆಟ್ಟಿರುವ ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳು ಗುರುವಾರ 14ನೇ ಪಂದ್ಯದಲ್ಲಿ ಕಾದಾಟವನ್ನು ನಡೆಸಲಿವೆ.
ಗುಜರಾತ್ ಹಾಗೂ ಯುಪಿ ತಂಡಗಳು ಈಗಾಗಲೇ ಸ್ಥಿರ ಪ್ರದರ್ಶನ ನೀಡಿವೆ. ಎರಡೂ ತಂಡಗಳಲ್ಲೂ ಪವರ್ ಹಿಟರ್‌ಗಳು ಇದ್ದಾರೆ. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಯುಪಿ 10 ರನ್‌ಗಳ ಸೋಲು ಕಂಡಿತ್ತು. ಈ ಲೀಗ್‌ನ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 207 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ಯುಪಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 197 ರನ್ ಸೇರಿಸಿತು.

ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರ್ತಿಯರಿದ್ದು, ಮೂರನೇ ಗೆಲುವಿನ ಮಾಲೆಯನ್ನು ಯಾವ ತಂಡ ತೊಡುತ್ತದೆ ಎಂಬುದೇ ಕುತೂಹಲ ಮೂಡಿಸಿದೆ. ಇನ್ನು ವಡೋದರಾದ ಪಿಚ್‌ನಲ್ಲಿ ಟಾಸ್ ಗೆದ್ದ ತಂಡ ಬೌಲಿಂಗ್ ಮಾಡಲು ಮುಂದಾಗುತ್ತವೆ. ಇಲ್ಲಿ ಇಬ್ಬನಿ ಬೀಳುವ ಸಾಧ್ಯತೆ ಇದೆ.
ಗಾರ್ಡ್ನರ್ ಆಕರ್ಷಣೆ
ಗುಜರತ್ ಜೈಂಟ್ಸ್ ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೆ ಇದೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಬೆತ್ ಮೂನಿ ಅವರ ಬ್ಯಾಟ್ ಕಳೆದ ಕೆಲವು ಪಂದ್ಯಗಳಲ್ಲಿ ಮಂಕಾಗಿದ್ದು, ಮಹತ್ವದ ಪಂದ್ಯದಲ್ಲಿ ಅಬ್ಬರಿಸುವ ಅನಿವಾರ್ಯತೆ ಇದೆ. ಭರವಸೆಯ ಆಟಗಾರ್ತಿಯರಾದ ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಜಾರ್ಜಿಯಾ ವೇರ್ಹ್ಯಾಮ್, ಭಾರತಿ ಫುಲ್ಮಾಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇನ್ನು ತಂಡದ ನಾಯಕಿ ಆಶ್ಲೀ ಗಾರ್ಡ್ನರ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುತ್ತಿದ್ದು ಭರವಸೆ ಮೂಡಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕಾಶ್ವಿ ಗೌತಮ್, ತನುಜಾ ಕನ್ವರ್, ರಾಜೇಶ್ವರಿ ಗಾಯಕವಾಡ್, ರೇಣುಕಾ ಸಿಂಗ್ ಎದುರಾಳಿ ಬ್ಯಾಟರ್‌ಗಳ ಕಾಡ ಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.

ಗುಜರಾತ್ ಜೈಂಟ್ಸ್ ಸಂಭಾವ್ಯ ತಂಡ : ಬೆತ್ ಮೂನಿ, ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಆಶ್ ಗಾರ್ಡ್ನರ್, ಜಾರ್ಜಿಯಾ ವೇರ್ಹ್ಯಾಮ್, ಕನಿಕಾ ಅಹುಜಾ, ಭಾರತಿ ಫುಲ್ಮಾಲಿ, ಕಾಶ್ವಿ ಗೌತಮ್, ತನುಜಾ ಕನ್ವರ್, ರಾಜೇಶ್ವರಿ ಗಾಯಕವಾಡ್, ರೇಣುಕಾ ಸಿಂಗ್.
ಸಂಘಟಿತ ಆಟವೇ ಬಲ
ಯುಪಿ ವಾರಿಯರ್ಸ್ ತಂಡದಲ್ಲಿ ಸ್ಟಾರ್ ಆಟಗಾರ್ತಿಯರು ಇದ್ದಾರೆ. ನಾಯಕಿ ಮೆಗ್ ಲ್ಯಾನಿಂಗ್ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸುವ ಅನಿವಾರ್ಯತೆ ಇದೆ. ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ಕ್ಲೋಯ್ ಟ್ರಯಾನ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ್ತಿ. ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್ ಮಿಂಚಬಲ್ಲ ಕ್ಷಮತೆ ಹೊಂದಿದ್ದಾರೆ. ಉಳಿದ ಬೌಲರ್‌ಗಳು ಬಿಗುವಿನ ದಾಳಿಯನ್ನು ನಡೆಸಿದ್ದೇ ಆದಲ್ಲಿ ಮೂರನೇ ಗೆಲುವಿನ ನಗೆ ಬೀರಬಹುದಾಗಿದೆ.
ಯುಪಿ ವಾರಿಯರ್ಸ್ ಸಂಭಾವ್ಯ ತಂಡ : ಮೆಗ್ ಲ್ಯಾನಿಂಗ್, ಕಿರಣ್ ನವಗಿರೆ/ಜಿ ತ್ರಿಶಾ, ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ಕ್ಲೋಯ್ ಟ್ರಯಾನ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ಆಶಾ ಶೋಭನಾ, ಶಿಖಾ ಪಾಂಡೆ, ಕ್ರಾಂತಿ ಗೌಡ್
ಪಂದ್ಯ ಆರಂಭವಾಗುವ ಸಮಯ ಯಾವಾಗ?
ಯುಪಿ ಹಾಗೂ ಗುಜರಾತ್ ಜೈಂಟ್ಸ್ ನಡುವಣ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದ್ದು, ಪಂದ್ಯಕ್ಕೆ ಅರ್ಧ ಗಂಟೆ ಮೊದಲು ಟಾಸ್ ನಡೆಯಲಿದೆ.
ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸುವುದು ಎಲ್ಲಿ?
ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನಲ್ಲಿ ವೀಕ್ಷಿಸಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಪಂದ್ಯವನ್ನು ಜಿಯೋ ಹಾಟ್ ಸ್ಟಾರ್‌ನಲ್ಲಿ ನೋಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications