WPL 2026: ಯುಪಿ ತಂಡವನ್ನು 10 ರನ್‌ಗಳಿಂದ ಮಣಿಸಿದ ಗುಜರಾತ್ ಶುಭಾರಂಭ
ನವಿ ಮುಂಬೈ: ನಾಯಕಿ ಆಶ್ಲೀ ಗಾರ್ಡ್ನರ್ ಅವರ ಭರ್ಜರಿ ಪ್ರದರ್ಶನದ ಬಲದಿಂದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ 10 ರನ್‌ಗಳಿಂದ ಯುಪಿ ವಾರಿಯರ್ಸ್ ತಂಡವನ್ನು ಮಣಿಸಿ ಶುಭಾರಂಭವನ್ನು ಮಾಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಬೆತ್ ಮೂನಿ ಹಾಗೂ ಸೋಫಿಯಾ ಡಿವೈನ್ ಜೋಡಿ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 41 ರನ್ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಬೆತ್ ಮೂನಿ 13 ರನ್ ಬಾರಿಸಿದ್ದಾಗ ಔಟ್ ಆದರೆ, ಇನ್ನೋರ್ವ ಆರಂಭಿಕ ಆಟಗಾರ್ತಿ ಸೋಫಿಯಾ ಡಿವೈನ್ 5 ಬೌಂಡರಿ, 2 ಸಿಕ್ಸರ್ ಸೇರಿದಂತೆ 38 ರನ್ ಸಿಡಿಸಿ ಪೆವಿಲಿಯನ್ ಸೇರಿದರು. 55 ರನ್‌ಗಳಿಗೆ ಆರಂಭಿಕರನ್ನು ಕಳೆದುಕೊಂಡ ಗುಜರಾತ್ ಜೈಂಟ್ಸ್ ಸಂಕಷ್ಟಕ್ಕೆ ಸಿಲುಕಿತು.

ಮೂರನೇ ವಿಕೆಟ್‌ಗೆ ಅನುಷ್ಕಾ ಶರ್ಮಾ ಹಾಗೂ ಆಶ್ಲೀ ಗಾರ್ಡ್ನರ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಯುಪಿ ವಾರಿಯರ್ಸ್ ಬೌಲರ್‌ಗಳು ವಿಫಲರಾದರು. ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡ ಜೋಡಿ ಅಬ್ಬರಿಸಿತು. ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತಾ ಸಾಗಿದ ಜೋಡಿ ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ಈ ಜೋಡಿ ಮೂರನೇ ವಿಕೆಟ್‌ಗೆ 63 ಎಸೆತಗಳಲ್ಲಿ 103 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಈ ಹಂತದಲ್ಲಿ 44 ರನ್ ಬಾರಿಸಿ ಭರವಸೆ ಮೂಡಿಸಿದ್ದ ಅನುಷ್ಕಾ 7 ಬೌಂಡರಿ ಸೇರಿದಂತೆ 44 ರನ್ ಸಿಡಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಆಶ್ಲೀ ಗಾರ್ಡ್ನರ್ ಅರ್ಧಶತಕ
ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಆಶ್ಲೀ ಗಾರ್ಡ್ನರ್ ಆಟ ಸಹ 65 ರನ್‌ಗಳಿಗೆ ಕೊನೆಯಾಯಿತು. ಇವರ ಅಮೋಘ ಇನಿಂಗ್ಸ್‌ನಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳು ಸೇರಿವೆ. ಗುಜರಾತ್ ಪರ ಜಾರ್ಜಿಯಾ ವೇರ್ಹ್ಯಾಮ್ ಅಜೇಯ 27, ಭಾರತಿ ಫುಲ್ಮಾಲಿ ಅಜೇಯ 14 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಗುಜರಾತ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 207 ರನ್ ಸೇರಿಸಿತು. ಯುಪಿ ತಂಡದ ಪರ ಸೋಫಿ ಎಕ್ಲೆಸ್ಟೋನ್ 2 ವಿಕೆಟ್ ಕಬಳಿಸಿದರೆ, ಶಿಖಾ ಪಾಂಡೆ, ಡಿಯಾಂಡ್ರಾ ಡಾಟಿನ್ ತಲಾ ಒಂದು ವಿಕೆಟ್ ಉರುಳಿಸಿದರು.
ಲಿಚ್‌ಫೀಲ್ಡ್ ಏಕಾಂಗಿ ಹೋರಾಟ
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಯುಪಿ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಕಿರಣ್ ನವಗಿರೆ 4 ರನ್‌ಗಳಿಗೆ ಆಟ ಮುಗಿಸಿದರು. ನಾಯಕಿ ಮೆಗ್ ಲ್ಯಾನಿಂಗ್ 5 ಬೌಂಡರಿ ಸಹಾಯದಿಂದ 30 ರನ್ ಸಿಡಿಸಿದರು. ಭರವಸೆಯ ಆಟಗಾರ್ತಿಯರಾದ ಹರ್ಲಿನ್ ಡಿಯೋಲ್, ದೀಪ್ತಿ ಶರ್ಮಾ ಅವರು ರನ್ ಕಲೆ ಹಾಕುವಲ್ಲಿ ವಿಫಲರಾದರು.

74 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಫೋಬೆ ಲಿಚ್‌ಫೀಲ್ಡ್ ಹಾಗೂ ಶ್ವೇತಾ ಶೆರಾವತ್ ಅವರು ಆಧಾರವಾದರು. ಈ ಜೋಡಿ 35 ಎಸೆತಗಳಲ್ಲಿ 69 ರನ್ ಸೇರಿಸಿತು. ಶ್ವೇತಾ ಶೆರಾವತ್ 25 ರನ್‌ಗಳಿಗೆ ಆಟ ಮುಗಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಫೋಬೆ ಲಿಚ್‌ಫೀಲ್ಡ್ 40 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಹಾಯದಿಂದ 78 ರನ್ ಸಿಡಿಸಿ ಔಟ್ ಆದರು. ಕೆಳಕ್ರಮಾಂಕದಲ್ಲಿ ಆಶಾ ಶೋಬನಾ ಅಜೇಯ 27 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಯುಪಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 197 ರನ್ ಸೇರಿಸಿ ಸೋಲು ಕಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications