WPL Eliminator: ಡೆಲ್ಲಿ ಕ್ಯಾಪಿಟಲ್ಸ್‌ಗೆ ಫೈನಲ್‌ಗೆ ಏರಲು 169 ರನ್ ಗುರಿ ನೀಡಿದ ಜೈಂಟ್ಸ್
ವಡೋದರಾ: ಆರಂಭಿಕ ಆಟಗಾರ್ತಿ ಬೆತ್ ಮೂನಿ ಬಾರಿಸಿದ ಅರ್ಧಶತಕದ ನೆರವಿನಿಂದ ಗುಜರಾತ್ ಜೈಂಟ್ಸ್ ಮಹಿಳಾ ಪ್ರೀಮಿಯರ್ ಲೀಗ್ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 169 ರನ್ ಗುರಿಯನ್ನು ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಗುಜರಾತ್ ಜೈಂಟ್ಸ್ ತಂಡದ ಆರಂಭ ಕಳಪೆಯಾಗಿತ್ತು. ಸ್ಪೋಟಕ ಆಟಗಾರ್ತಿ ಸೋಫಿ ಡಿವೈನ್ ಅವರಿಗೆ ಚಿನ್ಲೆ ಹೆನ್ರಿ ಅವರು ಖೆಡ್ಡಾ ತೋಡುವಲ್ಲಿ ಸಫಲರಾದರು. ಎರಡನೇ ವಿಕೆಟ್‌ಗೆ ಅನುಷ್ಕಾ ಶರ್ಮಾ ಹಾಗೂ ಆರಂಭಿಕ ಆಟಗಾರ್ತಿ ಬೆತ್ ಮೂನಿ ತಂಡವನ್ನು ಸಂಕಷ್ಟದಿಂದ ಮೇಲೆತ್ತುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಈ ಜೋಡಿ ಎರಡನೇ ವಿಕೆಟ್‌ಗೆ 19 ಎಸೆತಗಳಲ್ಲಿ 29 ರನ್ ಜೊತೆಯಾಟದ ಕಾಣಿಕೆ ನೀಡಿತು. ಈ ಹಂತದಲ್ಲಿ ಅನುಷ್ಕಾ ಶರ್ಮಾ ಅವರಿಗೆ ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಪೆವಿಲಿಯನ್‌ಗೆ ಸೇರಿಸಿದರು.

ನಂದಿನಿ ಶರ್ಮಾ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಆಶ್ಲೆ ಗಾರ್ಡ್ನರ್ ಅವರಿಗೆ ಖೆಡ್ಡಾ ತೋಡಿದರು. ಈ ಮೂಲಕ ಮೊದಲ ಓವರ್‌ನಲ್ಲೇ ಎರಡು ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದು ಅಬ್ಬರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕನಿಕಾ ಆಹುಜಾ (6) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಭರ್ಜರಿ ಜೊತೆಯಾಟ
59 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಬೆತ್ ಮೂನಿ ಹಾಗೂ ಜಾರ್ಜಿಯಾ ವೇರ್‌ಹ್ಯಾಮ್ ಜೋಡಿ ತಂಡ ಉತ್ತಮ ಮೊತ್ತ ಸೇರಿಸುವತ್ತ ದೃಷ್ಟಿ ನೆಡುವಂತೆ ಮಾಡಿತು. ಈ ಜೊಡಿ ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಈ ಜೋಡಿ ಗುಜರಾತ್ ಜೈಂಟ್ಸ್ ಕ್ಯಾಂಪ್‌ನಲ್ಲಿ ಮಂದಹಾಸ ಮೂಡಿಸಿತು. ಈ ಜೋಡಿ 46 ಎಸೆತಗಳಲ್ಲಿ 61 ರನ್ ಸೇರಿಸಿತು. ಈ ಹಂತದಲ್ಲಿ ವೇರ್‌ಹ್ಯಾಮ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 35 ರನ್ ಸಿಡಿಸಿ ಔಟ್ ಆದರು.
ಏಳನೇ ವಿಕೆಟ್‌ಗೆ ಬೆತ್ ಮೂನಿ ಹಾಗೂ ಕಾಶ್ವಿ ಗೌತಮ್ ಜೋಡಿ ಸಹ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ಜೋಡಿ 39 ರನ್ ಸೇರಿಸಿತು. ಕಾಶ್ವಿ ಗೌತಮ್ 18 ರನ್ ಬಾರಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ರನ್‌ಔಟ್ ಆದರು.
ಬೆತ್ ಮೂನಿ ಅರ್ಧಶತಕ
ಟೂರ್ನಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಬೆತ್ ಮೂನಿ ಒತ್ತಡದ ಸನ್ನಿವೇಶದಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದರು. ಇವರು ಒಂದು ತುದಿಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ ಇನ್ನೊಂದು ತುದಿಯನ್ನು ಕಚ್ಚಿಕೊಂಡು ನಿಂತಿದ್ದ ಬೆತ್ ಮೂನಿ, ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದರು. ಅಲ್ಲದೆ ಡೆಲ್ಲಿ ಬೌಲರ್‌ಗಳನ್ನು ಕಾಡಿದರು. ಮೂನಿ ಎಲಿಮಿನೇಟರ್ ಪಂದ್ಯದಲ್ಲಿ 6 ಬೌಂಡರಿ ನೆರವಿನಿಂದ ಅಜೇಯ 62 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 168 ರನ್ ಸೇರಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಚಿನ್ಲೆ ಹೆನ್ರಿ 3, ನಂದಿನಿ ಶರ್ಮಾ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications