ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ್ತಿ ಎಲ್ಲಿಸಾ ಪೆರ್ರಿ ಅವರಿಗೆ ಎಲಿಮಿನೆಟರ್ ಪಂದ್ಯದ ಬಳಿಕ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ನಿಜಕ್ಕೂ ಈ ಉಡುಗೊರೆ ನೋಡಿದ ಪೆರ್ರಿ ನಗಲು ಆರಂಭಿಸಿದ್ದಾರೆ. ಹಾಗಿದ್ದರೆ ಆಯೋಜಕರು ನೀಡಿದ ಉಡುಗೊರೆ ಏನು ಇಲ್ಲಿದೆ ನೋಡಿ ಮಾಹಿತಿ.
ಶುಕ್ರವಾರ ದೆಹಲಿಯ ಅರುಣ್ ಜೆಟ್ಲಿ ಅಂಗಳದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಎಲಿಮಿನೇಟರ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ಲೋ ಸ್ಕೋರ್ ಡಿಫೆಂಡ್ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 135 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 130 ರನ್ ಸೇರಿಸಿ ಸೋಲು ಕಂಡಿತು. ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ್ತಿ ಎಲ್ಲಿಸಾ ಪೆರ್ರಿ

ಟೂರ್ನಿಯಲ್ಲಿ ಆರ್‌ಸಿಬಿ ಪರ ಆಲ್‌ರೌಂಡರ್ ಪ್ರದರ್ಶನ ನೀಡುತ್ತಿರುವ ಎಲ್ಲಿಸಾ ಪೆರ್ರಿ ಮಹತ್ವದ ಪಂದ್ಯದಲ್ಲಿನ 50 ಎಸೆತಗಳಲ್ಲಿ 66 ರನ್ ಸಿಡಿಸಿದರು. ಅಲ್ಲದೆ ಬೌಲಿಂಗ್‌ನಲ್ಲೂ ಒಂದು ವಿಕೆಟ್ ಪಡೆದು ಮಿಂಚಿದರು. ಇವರ ಅಮೋಘ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಅಲ್ಲದೆ ಇನ್ನೊಂದು ವಿಶೇಷ ಉಡುಗೊರೆ ಸಿಕ್ಕಿದೆ.
ಅಷ್ಟಕ್ಕೂ ಬ್ರೋಕನ್ ಗ್ಲಾಸ್ ಉಡುಗೊರೆ ನೀಡಲು ಕಾರಣ ವೇನು ಎಂಬ ಪ್ರಶ್ನೆ ಹಲವರ ಮನದಲ್ಲಿ ಏಳುವುದು ಸಹಜ. ಇದಕ್ಕೆ ಕಾರಣ ಪೆರ್ರಿ ಲೀಗ್ ಹಂತದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಸಿಕ್ಸರ್ ಬಾರಿಸಿದಾಗ ಇವರು ಬಾರಿಸಿದ ಚೆಂಡು ಮೈದಾನದಲ್ಲಿ ಇಟ್ಟಿದ್ದ ಡಿಸಪ್ಲೇ ಕಾರಿನ ಖಿಡಕಿ ಛಿದ್ರ ಗೊಳಿಸಿತ್ತು.

ಆರ್‌ಸಿಬಿ ಎಲಿಮಿನೆಟರ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಫೈನಲ್‌ಗೆ ಅರ್ಹತೆಯನ್ನು ಪಡೆದುಕೊಂಡಿದೆ. ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ನೇತೃತ್ವದ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲು ಎದುರಿಸಲಿದೆ. ಅಲ್ಲದೆ ಆರ್‌ಸಿಬಿ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ವಿಶ್ವದ ಸ್ಟಾರ್ ಪ್ಲೇಯರ್‌ಗಳಲ್ಲಿ ಒಬ್ಬರಾಗಿರುವ ಎಲ್ಲಿಸಾ ಪೆರ್ರಿ ಅವರು ಪ್ರಸಕ್ತ wplನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಎಲ್ಲಿಸಾ ಪೆರ್ರಿ ಅಬ್ಬರಿಸಿದ್ದಾರೆ. ಆಡಿರುವ ಎಂಟು ಪಂದ್ಯಗಳಲ್ಲಿ ಇವರು 312 ರನ್ ಸಿಡಿಸಿದ್ದಾರೆ. ಅಲ್ಲದೆ ಮುಂಬೈ ಇಂಡಿಯನ್ಸ್ ವಿರುದ್ಧ ಲೀಗ್ ಹಂತದ ಪಂದ್ಯದಲ್ಲಿ ಎಲ್ಲಿಸಾ ಆರು ವಿಕೆಟ್ ಕಬಳಿಸಿ ಸಾಧನೆ ಮಾಡಿದ್ದಾರೆ. ಹೀಗಾಗಿಯೇ ಫೈನಲ್‌ನಲ್ಲಿ ಇವರು ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚುವ ಅನಿವಾರ್ಯತೆ ಇದೆ.