ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್‌ಗೆ ಅರ್ಹತೆ ಪಡೆದಿದೆ. ಈ ಮೂಲಕ ಸ್ಮೃತಿ ಮಂಧಾನ ಪಡೆ ಎರಡನೇ ಬಾರಿಗೆ ಕಪ್ ಎತ್ತುವ ಕನಸು ಕಾಣುತ್ತಿದೆ. ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಆರ್‌ಸಿಬಿ ಫೈನಲ್‌ವರೆಗೂ ನಡೆದ ಬಂದ ಹಾದಿ ಹೇಗಿತ್ತು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಆರ್‌ಸಿಬಿ ಈ ವರ್ಷದ ಲೀಗ್ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾದ ಎಲ್ಲಿಸಾ ಪೆರ್ರಿ ವೈಯಕ್ತಿಕ ಕಾರಣಗಳನ್ನು ನೀಡಿ ತಂಡದಿಂದ ಹೊರ ನಡೆದರು. ಆಗ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಪಂದ್ಯಗಳು ಆರಂಭವಾಗುತ್ತಿದ್ದಂತೆ ಹೊಸ ಜೋಶ್ ಬಂದಿತು. ಪ್ರತಿ ಪಂದ್ಯದಲ್ಲೂ ಒಬ್ಬ ಒಬ್ಬ ಆಟಗಾರ್ತಿ ಮಿಂಚಿದ್ದಾರೆ. ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ ಬೆಂಗಳೂರು ನೇರವಾಗಿ ಫೈನಲ್ ಪ್ರವೇಶಿಸಿದೆ. ಆರ್‌ಸಿಬಿ ಫೈನಲ್‌ನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಾದಾಟ ನಡೆಸಲಿದೆ.

ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 158 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬೆಂಗಳೂರು ತಂಡ 65 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ್ತಿ ನಾಡಿನ್ ಡಿ ಕ್ಲರ್ಕ್ 44 ಎಸೆತಗಳಲ್ಲಿ 63 ರನ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಬೆಂಗಳೂರು ಲೀಗ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿತು.
ಪಂದ್ಯ ಶ್ರೇಷ್ಠ ಆಟಗಾರ್ತಿ: ನಾಡಿನ್ ಡಿ ಕ್ಲರ್ಕ್
ಎರಡನೇ ಲೀಗ್ ಪಂದ್ಯದಲ್ಲಿ ಯುಪಿ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 143 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಪರ ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಪರಿಣಾಮ ಆರ್‌ಸಿಬಿ 47 ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆದ್ದಿತು. ಈ ಪಂದ್ಯದಲ್ಲಿ ಗ್ರೇಸ್ ಹ್ಯಾರಿಸ್ 10 ಬೌಂಡರಿ, 5 ಸಿಕ್ಸರ್ ಸಹಾಯದಿಂದ 85 ರನ್ ಸಿಡಿಸಿದರು. ಇವರಿಗೆ ಈ ಪಂದ್ಯದಲ್ಲಿ ಸ್ಮೃತಿ ಸಹ ಉತ್ತಮ ಸಾಥ್ ನೀಡಿದರು.

ಪಂದ್ಯ ಶ್ರೇಷ್ಠ ಆಟಗಾರ್ತಿ: ಗ್ರೇಸ್ ಹ್ಯಾರಿಸ್
ಆರಂಭಿಕ ಮೊದಲ ಎರಡು ಪಂದ್ಯಗಳಲ್ಲಿ ರನ್ ಚೇಸ್ ಮಾಡಿದ್ದ ಬೆಂಗಳೂರು ಮೂರನೇ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿತು. ಈ ವೇಳೆ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 182 ರನ್ ಕಲೆ ಹಾಕಿತು. ಗುಜಾರಾತ್ 18.5 ಓವರ್‌ಗಳಲ್ಲಿ ಸರ್ವಪತನ ಕಂಡಿತು. ಈ ಪಂದ್ಯದಲ್ಲಿ ಆಲ್‌ರೌಂಡರ್ ರಾಧಾ ಯಾದವ್ 66 ರನ್ ಬಾರಿಸಿ ಮಿಂಚಿದರು.
ಪಂದ್ಯ ಶ್ರೇಷ್ಠ ಆಟಗಾರ್ತಿ: ರಾಧಾ ಯಾದವ್
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 167 ರನ್‌ಗಳ ಗುರಿಯನ್ನು ಆರ್‌ಸಿಬಿ 18.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಮುಟ್ಟಿ ಬೀಗಿತು. ಈ ಪಂದ್ಯದಲ್ಲಿ ಬೆಂಗಳೂರು ತಂಡದ ಪರ ಸ್ಮೃತಿ ಮಂಧಾನ 96 ರನ್‌ಗಳ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದರು.
ಪಂದ್ಯ ಶ್ರೇಷ್ಠ ಆಟಗಾರ್ತಿ: ಸ್ಮೃತಿ ಮಂಧಾನ
ಲೀಗ್ ಹಂತದ ಐದನೇ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 178 ರನ್ ಸೇರಿಸಿತು. ಅಲ್ಲದೆ ಸ್ಪರ್ಧಾತ್ಮಕ ಮೊತ್ತವನ್ನು ಡಿಫೆಂಡ್ ಮಾಡಿಕೊಂಡಿತು. ಈ ಪಂದ್ಯದಲ್ಲೂ ಆರ್‌ಸಿಬಿ ಗೆಲುವಿನಲ್ಲಿ ಮಿಂಚಿದ್ದು, ಮಧ್ಯಮ ಕ್ರಮಾಂಕದ ಆಟಗಾರ್ತಿ ಗೌತಮಿ ನಾಯಕ್. ಇವರು ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರೂ ಸ್ಥಿರ ಪ್ರದರ್ಶನ ನೀಡಿ 73 ರನ್ ಸಿಡಿಸಿದರು. ಈ ಪಂದ್ಯದಲ್ಲಿ ಗೆದ್ದ ಬೆಂಗಳೂರು ಪ್ಲೇ ಆಫ್ ಹಾದಿ ಸುಗಮ ಮಾಡಿಕೊಂಡಿತು.
ಪಂದ್ಯ ಶ್ರೇಷ್ಠ ಆಟಗಾರ್ತಿ: ಗೌತಮಿ ನಾಯಕ್
ಆರ್‌ಸಿಬಿ ಇನ್ನೊಂದು ಪಂದ್ಯವನ್ನು ಗೆದ್ದರೆ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುವ ವೇಳೆಯಲ್ಲಿ ಡೆಲ್ಲಿ ವಿರುದ್ಧ 7 ವಿಕೆಟ್‌ಗಳಿಂದ ಸೋತರೆ, ಮುಂಬೈ ವಿರುದ್ಧ 15 ರನ್‌ಗಳಿಂದ ಸೋಲು ಕಂಡಿತು. ಮುಂಬೈ ವಿರುದ್ಧದ ಪಂದ್ಯದಲ್ಲಿ ರಿಚಾ ಘೋಷ್ ಭರ್ಜರಿ ಬ್ಯಾಟಿಂಗ್ ನಡೆಸಿ ಮಿಂಚಿದರು.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿತು. ಈ ಪಂದ್ಯದಲ್ಲಿ ಯುಪಿ 143 ರನ್‌ಗಳಿಗೆ ಆಲೌಟ್ ಆಯಿತು. ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ಈ ಗುರಿಯನ್ನು 13.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಮುಟ್ಟಿತು. ಈ ಪಂದ್ಯದಲ್ಲಿ ಗ್ರೇಸ್ ಹ್ಯಾರಿಸ್ 75 ರನ್ ಬಾರಿಸಿ 2 ವಿಕೆಟ್ ಉರುಳಿಸಿದರು.
ಪಂದ್ಯ ಶ್ರೇಷ್ಠ ಆಟಗಾರ್ತಿ: ಗ್ರೇಸ್ ಹ್ಯಾರಿಸ್