ಜನವರಿ 9 ರಿಂದ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ದೇಶ ಹಾಗೂ ವಿದೇಶಿ ಆಟಗಾರರು ಒಂದೇ ಸೂರಿನಲ್ಲಿ ಆಡುವುದನ್ನು ಕಾಣಬಹುದು. ಐಪಿಎಲ್ ಮಾದರಿಯಲ್ಲಿ ಆರಂಭವಾದ ಈ ಲೀಗ್ ಹಲವು ಯುವ ಆಟಗಾರ್ತಿಯರಿಗೆ ವೇದಿಕೆ ಆಗಿದೆ. ಈ ವೇದಿಕೆಯನ್ನು ಸರಿಯಾಗಿ ಬಳಸಿಕೊಂಡಿರುವ ಆಟಗಾರ್ತಿಯರು ದೇಶೀಯ ತಂಡ ಸೇರುವ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.
ಬ್ಯಾಟರ್‌ಗಳೇ ಅಬ್ಬರಿಸುವ ಟಿ20 ಕ್ರಿಕೆಟ್‌ನಲ್ಲಿ ಬೌಲರ್‌ಗಳು ಸಹ ಬಿಗುವಿನ ದಾಳಿ ನಡೆಸಿ ಹೆಸರು ಮಾಡಿದ್ದಾರೆ. ಮಹಿಳಾ ಲೀಗ್‌ನಲ್ಲಿ ಬ್ಯಾಟರ್‌ಗಳ ತಂತ್ರಕ್ಕೆ ಪ್ರತಿ ತಂತ್ರವನ್ನು ಬೌಲರ್‌ಗಳು ಹೆಣೆದು ಆರ್ಭಟಿಸಿದ್ದಾರೆ. ಲೀಗ್‌ನಲ್ಲಿ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಿದ ಬೌಲರ್‌ಗಳ ಪಟ್ಟಿಯಲ್ಲಿ ವಿದೇಶಿ ಆಟಗಾರ್ತಿಯರಿಗೆ ಅಗ್ರ ಸ್ಥಾನ. ಹಾಗಿದ್ದರೆ ಗರಿಷ್ಠ ವಿಕೆಟ್ ಪಡೆದ ಬೌಲರ್ ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.

ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಕೀರ್ತಿ ವೆಸ್ಟ್ ಇಂಡೀಸ್ ತಂಡದ 27 ವರ್ಷದ ಹೇಲಿ ಮ್ಯಾಥ್ಯೂಸ್ ಅವರಿಗೆ ಸಲ್ಲುತ್ತದೆ. ಇವರು ಈ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಬೌಲಿಂಗ್ ಮಾಡಿದ್ದು, ಅಬ್ಬರ ನಡೆಸಿದ್ದಾರೆ. ಹೇಲಿ ಆಡಿದ 29 ಪಂದ್ಯಗಳಲ್ಲಿ 41 ವಿಕೆಟ್ ಪಡೆದಿದ್ದಾರೆ. ಇವರು ಈ ಬಾರಿಯ ಲೀಗ್‌ನಲ್ಲಿ 9 ವಿಕೆಟ್ ಪಡೆಯುವಲ್ಲಿ ಸಫಲರಾದರೆ, ಲೀಗ್ ಇತಿಹಾಸದಲ್ಲಿ 50 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲೂ ಮುಂಬೈ ತಂಡದ ಬೌಲರ್‌ಗಳು ಕಾಣಿಸಿಕೊಳ್ಳುತ್ತಾರೆ. ಮುಂಬೈ ಪರ ಬೌಲಿಂಗ್ ಮಾಡುವ 25ವರ್ಷ ಯುವ ಆಟಗಾರ್ತಿ ಅಮೆಲಿಯಾ ಕೆರ್ ತಮ್ಮ ಬಿಗುವಿನ ದಾಳಿಯಿಂದ ಎದುರಾಳಿಗಳನ್ನು ಕಾಡಬಲ್ಲರು. ಇವರು ಆಡಿದ 29 ಪಂದ್ಯಗಳಲ್ಲಿ 40 ವಿಕೆಟ್ ಪಡೆದಿದ್ದಾರೆ. ಇವರು ಸಹ ಲೀಗ್‌ನಲ್ಲಿ ವಿಕೆಟ್‌ಗಳ ಅರ್ಧಶತಕ ಬಾರಿಸುವ ಕನಸು ಕಾಣುತ್ತಿದ್ದಾರೆ.
ಯುಪಿ ವಾರಿಯರ್ಜ್ ತಂಡದ ಸೋಫಿ ಎಕ್ಲೆಸ್ಟೋನ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಆಟಗಾರ್ತಿ. ಇವರು ಆಡಿದ 25 ಪಂದ್ಯಗಳಲ್ಲಿ 36 ವಿಕೆಟ್ ಪಡೆದು ಬೀಗಿದ್ದಾರೆ. ಇನ್ನು ಆಸ್ಟ್ರೇಲಿಯಾದ ಜೆಸ್ ಜೊನಾಸ್ಸೆನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇವರು ಈ ಬಾರಿಯ ಲೀಗ್‌ನಲ್ಲಿ ಭಾಗವಹಿಸುತ್ತಿಲ್ಲ. ಇವರು ಆಡಿದ 24 ಪಂದ್ಯಗಳಲ್ಲಿ 33 ವಿಕೆಟ್ ಪಡೆದಿದ್ದಾರೆ. ಟಾಪ್ 5 ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೋರ್ವ ಆಟಗಾರ್ತಿ ಮುಂಬೈ ಇಂಡಿಯನ್ಸ್ ತಂಡದ ನ್ಯಾಟ್ ಸ್ಕೈವರ್-ಬ್ರಂಟ್. ಇವರು ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನೆರವಾಗಬಲ್ಲ ಆಟಗಾರ್ತಿ. ಇವರು ಸಹ ಆಡಿದ 29 ಪಂದ್ಯಗಳಲ್ಲಿ 32 ವಿಕೆಟ್ ಕಬಳಿಸಿದ್ದಾರೆ.
ಭಾರತದ ಪರ ಈ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ಶಿಖಾ ಪಾಂಡೆ ಅವರದ್ದಾಗಿದೆ. ಇವರು ಆಡಿದ 27 ಪಂದ್ಯಗಳಲ್ಲಿ 30 ವಿಕೆಟ್ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಯುಪಿ ವಾರಿಯರ್ಜ್ ಪರ ಕಣಕ್ಕೆ ಇಳಿಯುವ ದೀಪ್ತಿ ಶರ್ಮಾ ಸಹ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಸದ್ಯ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಇವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸದ್ಯ 27 ವಿಕೆಟ್ ಕಬಳಿಸಿದ್ದಾರೆ. ಈ ಬಾರಿಯ ಲೀಗ್‌ನಲ್ಲಿ ಅಬ್ಬರಿಸುವ ಪ್ಲ್ಯಾನ್ ದೀಪ್ತಿ ಅವರದ್ದಾಗಿದೆ.