ನವಿ ಮುಂಬೈ: ಭರವಸೆಯ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ಹಾಗೂ ನಾಯಕಿ ಮೆಗ್ ಲ್ಯಾನಿಂಗ್ ಅವರು ಬಾರಿಸಿದ ಅರ್ಧಶತಕದ ಬಲದಿಂದ ಯುಪಿ ವಾರಿಯರ್ಸ್ ತಂಡ 22 ರನ್‌ಗಳಿಂದ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಯುಪಿ ತಂಡ ಸತತ ಎರಡನೇ ಗೆಲುವಿನ ನಗೆ ಬೀರಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಯುಪಿ ತಂಡದ ಆರಂಭಿಕ ಆಟಗಾರ್ತಿ ಕಿರಣ್ ನವಗಿರೆ ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಫೋಬೆ ಲಿಚ್‌ಫೀಲ್ಡ್ ಜೋಡಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಯಿತು. ಈ ಜೊಡಿ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿತು. ಈ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ಈ ಜೋಡಿ ನೆರವಾಯಿತು.

ನಾಯಕಿ ಮೆಗ್ ಲ್ಯಾನಿಂಗ್ 45 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ನೆರವಿನಿಂದ 79 ರನ್ ಬಾರಿಸಿ ಔಟ್ ಆದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಫೋಬೆ ಲಿಚ್‌ಫೀಲ್ಡ್ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 61 ರನ್ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಹರ್ಲಿನ್ ಡಿಯೋಲ್ 25, ಕ್ಲೋಯ್ ಟ್ರಯಾನ್ 21 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಯುಪಿ ವಾರಿಯರ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 187 ರನ್ ಸೇರಿಸಿತು. ಮುಂಬೈ ಪರ ಅಮೆಲಿಯಾ ಕೆರ್ 3, ನ್ಯಾಟ್ ಸಿವರ್-ಬ್ರಂಟ್ 2 ವಿಕೆಟ್ ಪಡೆದರು.
188 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ತಂಡದ ಆರಂಭ ಸಾಧಾರಣವಾಗಿತ್ತು. ಹ್ಯಾಲಿ ಮ್ಯಾಥ್ಯೂಸ್ (13), ಸಜೀವನ್ ಸಂಜನ (10), ನ್ಯಾಟ್ ಸಿವರ್-ಬ್ರಂಟ್ (15), ನಾಯಕಿ ಹರ್ಮನ್ ಪ್ರೀತ್ ಕೌರ್ (18), ನಿಕೋಲಾ ಕ್ಯಾರಿ (6) ರನ್ ಸಿಡಿಸಿ ತಂಡಕ್ಕೆ ನೆರವಾಗುವಲ್ಲಿ ವಿಫಲರಾದರು. 5ನೇ ವಿಕೆಟ್‌ಗೆ 69 ರನ್‌ಗಳಿಂದ ಸಂಕಷ್ಟದಲ್ಲಿದ್ದಾಗ ತಂಡಕ್ಕೆ ಅಮೆಲಿಯಾ ಕೆರ್ ಹಾಗೂ ಅಮನ್‌ಜೋತ್ ಕೌರ್ ಜೋಡಿ ತಂಡಕ್ಕೆ ಸೊಗಸಾದ ಜೊತೆಯಾಟವನ್ನು ನೀಡಿತು. ಈ ಜೋಡಿ 45 ಎಸೆತಗಳಲ್ಲಿ 83 ರನ್ ಸೇರಿಸಿದರು. ಅಮೆಲಿಯಾ ಕೆರ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 49 ರನ್ ಸಿಡಿಸಿದರೆ, ಅಮನ್‌ಜೋತ್ 41 ರನ್ ಬಾರಿಸಿದರು. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 165 ರನ್ ಸಿಡಿಸಿ ಸೋಲು ಕಂಡಿತು.

ಮುಂಬೈ ಇಂಡಿಯನ್ಸ್ ಆಡಿದ 5 ಪಂದ್ಯಗಳಲ್ಲಿ 2 ಜಯ, 3 ಸೋಲು ಕಂಡಿದ್ದು 4 ಅಂಕಗಳನ್ನು ಕಲೆ ಹಾಕಿದೆ. ಇನ್ನು ಯುಪಿ ವಾರಿಯರ್ಸ್ ಆಡಿದ 5 ಪಂದ್ಯಗಳಲ್ಲಿ 2 ಗೆಲುವು, 3 ಪಂದ್ಯಗಳಲ್ಲಿ ನಿರಾಸೆ ಕಂಡಿದ್ದು 4 ಅಂಕವನ್ನು ಕಲೆ ಹಾಕಿದೆ.