ಕೊಹ್ಲಿ ನಂತರ ಮಾಧ್ಯಮದ ಮುಂದೆ ಸಿಡಿದ ಭಾರತದ ಮತ್ತೋರ್ವ ಆಟಗಾರ: ಗಂಗೂಲಿ, ದ್ರಾವಿಡ್ ವಿರುದ್ಧ ಸಾಹಾ ಕಿಡಿ

ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಶನಿವಾರ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಟೆಸ್ಟ್ ಸರಣಿಗಾಗಿ ಭಾರತೀಯ ಆಯ್ಕೆ ಮಂಡಳಿ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅನುಭವಿ ಆಟಗಾರರಾದ ಅಜಿಂಕ್ಯಾ ರಹಾನೆ, ಚೇತೇಶ್ವರ್ ಪುಜಾರ, ವೃದ್ಧಿಮಾನ್ ಸಾಹಾ ಹಾಗೂ ಇಶಾಂತ್ ಶರ್ಮಾ ಅವರನ್ನು ಮುಂದಿನ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿದೆ.
ಈ ಆಯ್ಕೆಯ ಬಳಿಕ ಭಾರತ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಾಹಾ ತಮ್ಮ ಕಡೆಗಣನೆಯ ಬಗ್ಗೆ ಕಿಡಿಕಾರಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ವಿರುದ್ಧವೇ ವೃದ್ಧಿಮಾನ್ ಸಾಹಾ ಗಂಭೀರ ಹೇಳಿಕೆಯನ್ನು ನೀಡಿದ್ದಾರೆ. ಟೆಸ್ಟ್‌ನಿಂದ ನಿವೃತ್ತಿ ಪಡೆಯುವಂತೆ ಒತ್ತಾಯಿಸಲಾಗಿದೆ ಎಂದು ಕೂಡ ಹೇಳಿರುವ ವೃದ್ಧಿಮಾನ್ ಸಾಹಾ ನಿವೃತ್ತಿ ತನ್ನ ವೈಯಕ್ತಿಕವಾದ ನಿರ್ಧಾರ ಎಂದು ಹೇಳಿದ್ದಾರೆ.

ಗಂಗೂಲಿ, ದ್ರಾವಿಡ್ ವಿರುದ್ಧ ಸಾಹಾ ಹೇಳಿಕೆ
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದ ವೃದ್ಧಿಮಾನ್ ಸಾಹಾ ಶನಿವಾರ ತಮ್ಮನ್ನು ತಂಡದಿಂದ ಕೈಬಿಟ್ಟಿರುವ ವಿಚಾರವಾಗಿ ಪ್ರಮುಖ ಹೇಳಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನೀಡಿದ ಪ್ರದರ್ಶನದ ಬಳಿಕ ಸೌರವ್ ಗಂಗೂಲಿ ತನ್ನಲ್ಲಿ ತಂಡದ ತಂಡದಲ್ಲಿ ತನ್ನ ಸ್ಥಾನದ ಬಗ್ಗೆ ಭರವಸೆಯನ್ನು ನೀಡಿದ್ದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಕೋಚ್ ರಾಹುಲ್ ದ್ರಾವಿಡ್ ಮುಂದಿನ ಸರಣಿಗೆ ಆಯ್ಕೆಗೆ ಪರಿಗಣಿಸದಿರುವ ಕಾರಣ ನಿವೃತ್ತಿಯ ಬಗ್ಗೆ ಯೋಚಿಸುವಂತೆ ಹೇಳಿದ್ದರು ಎಂದಿದ್ದಾರೆ ವೃದ್ಧಿಮಾನ್ ಸಾಹಾ.

ಟೆಸ್ಟ್ ಸ್ಥಾನದ ಬಗ್ಗೆ ಭರವಸೆ ನೀಡಿದ್ದರು ಗಂಗೂಲಿ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ನಾನು ಕತ್ತು ನೋವಿನ ಮಧ್ಯೆಯೂ ಆಡಿ ಅಜೇಯ 61 ರನ್ ಗಳಿಸಿದ್ದಾಗ ತಂಡ ಬಹುತೇಕ ಗೆಲುವಿನ ಸನಿಹಕ್ಕೆ ಹೋಗಿತ್ತು. ಆ ಸಂದರ್ಭದಲ್ಲಿ ಗಂಗೂಲಿ 'ನಾನು ಇಲ್ಲಿ ಇರುವವರೆಗೆ ನೀನು ಆತಂಕಪಡುವ ಅಗತ್ಯವಿಲ್ಲ' ಎಂದು ಮಾತನ್ನು ಹೇಳಿದ್ದರು. ಅದು ಸಹಜವಾಗಿಯೇ ನನಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸಿತ್ತು. ಆದರೆ ಗಂಗೂಲಿ ಆಡಿದ್ದ ಈ ಮಾತು ಒಂದೇ ಸರಣಿಯಲ್ಲಿ ವ್ಯತಿರಿಕ್ತವಾಗಿತ್ತು. ನನಗೆ ಆಘಾತ ಉಂಟಾಗಿತ್ತು. ಒಂದು ಸರಣಿಯ ಅಂತರದಲ್ಲಿ ಏನಾಯಿತು ಎಂಬುದನನ್ಉ ಅರ್ಥ ಮಾಡಿಕೊಳ್ಳಲು ನಾನು ವಿಫಲನಾದೆ. ನನಗೆ ವಯಸ್ಸಾಯಿತು ಎಂಬುದಾ ಅಥವಾ ಬೇರೇನಾದರೂ ಇದೆಯಾ? ದಾದಾ ಏನು ಹೇಳಿದ್ದರೋ ಅದಕ್ಕಿಂತ ಇಲ್ಲಿ ಭಿನ್ನವಾಗಿತ್ತು. ಸಹಜವಾಗಿಯೇ ನಾನು ಶಾಕ್ ಆಗಿದ್ದೆ" ಎಂದು ವೃದ್ಧಿಮಾನ್ ಸಾಹಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ ಹೇಳಿಕೆ ನೀಡಿದ್ದಾರೆ.

ನಿವೃತ್ತಿ ಬಗ್ಗೆ ಯೋಚಿಸುವಂತೆ ದ್ರಾವಿಡ್ ಹೇಳಿದ್ದರು
ಮುಂದುವರಿದು ಮಾತನಾಡಿರುವ ಸಾಹಾ "ಈಗ ತಂಡ ಪ್ರಕಟವಾಗಿರುವ ಕಾರಣ ನಾನು ಆಯ್ಕೆಯ ಬಗ್ಗೆ ಸತ್ಯವನ್ನು ಬಹಿರಂಗಪಡಿಸಬಹುದಾಗಿದೆ. ರಾಹುಲ್ ದ್ರಾವಿಡ್ ಕೂಡ ನನ್ನ ಬಳಿ ಬಂದು ನನ್ನನ್ನು ತಂಡದಿಂದ ಕೈಬಿಡುವ ಬಗ್ಗೆ ಮಾತುಗಳಿವೆ ಎಂದಿದ್ದರು. ಈ ಸಂದರ್ಭದಲ್ಲಿ ಅವರು ನಿವೃತ್ತಿಯನ್ನು ತೆಗೆದುಕೊಳ್ಳುವಂತೆ ಪರೋಕ್ಷವಾಗಿ ಸೂಚಿಸಿದ್ದರು. ಆದರೆ ನಿವೃತ್ತಿ ಎಂಬುದು ನನ್ನ ವೈಯಕ್ತಿಕ ನಿರ್ಧಾರವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಸಾಹಾ ಹೇಳಿಕೆ ನೀಡಿದ್ದಾರೆ.

ಮುಂದೆ ಆಯ್ಕೆಗೆ ಪರಿಗಣಿಸಲ್ಲ ಎಂದು ತಿಳಿಸಲಾಗಿದೆ
ವೃದ್ಧಿಮಾನ್ ಸಾಹಾ ನ್ಯೂಜಿಲೆಂಡ್ ವಿರುದ್ಧ ಭಾರತದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಅಂತಿಮ ಬಾರಿಗೆ ಕಣಕ್ಕಿಳಿದಿದ್ದಾರೆ. ನಂತರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಟೆಸ್ಟ್ ಸ್ಕ್ವಾಡ್‌ನಲ್ಲಿ ಸಾಹಾ ಇದ್ದರು ಕುಡ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. "ತಂಡದ ಆಯ್ಕೆ ಮಂಡಳಿ ಇನ್ನು ಮುಂದೆ ನನ್ನನ್ನು ಆಯ್ಕೆಗೆ ಪರಿಗಣಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಚೇತನ್ ಶರ್ಮಾ ನನಗೆ ಕರೆ ಮಾಡಿ ಶ್ರೀಲಂಕಾ ವಿರುದ್ಧದ ಸರಣಿಗೆ ನನ್ನನ್ನು ಆಯ್ಕ ಮಾಡಲಾಗುವುದಿಲ್ಲ ಎಂದಿದ್ದರು. ಇದು ಕೇವಲ ಶ್ರೀಲಂಕಾ ವಿರುದ್ಧದ ಸರಣಿಗೆ ಮಾತ್ರವಾ ಎಂದು ನಾನು ಕೇಳಿದ್ದೆ. ಆಗ ಅವರು ಈಗಿನಿಂದ ನಿಮ್ಮನ್ನು ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ" ಎಂದು ವೃದ್ಧಿಮಾನ್ ಸಾಹಾ ಗಂಭೀರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications