ಹೈದರಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ನಂತರ, ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2023-25) ಅಂಕಪಟ್ಟಿಯಲ್ಲಿ ಭಾರೀ ನಷ್ಟವನ್ನು ಅನುಭವಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 190 ರನ್‌ಗಳ ಮುನ್ನಡೆ ಪಡೆದರೂ, ಭಾರತ ತಂಡ ಟೆಸ್ಟ್ ಪಂದ್ಯವನ್ನು ಸೋತಿರುವುದು ಹಲವು ವರ್ಷಗಳ ನಂತರ ಇದೇ ಮೊದಲಾಗಿದೆ. ಪ್ರವಾಸಿ ತಂಡದ ಒಲ್ಲಿ ಪೋಪ್ ಮತ್ತು ಟಾಮ್ ಹಾರ್ಟ್ಲಿ ಅವರ ಅದ್ಭುತ ಪ್ರದರ್ಶನದಿಂದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಸೋಲಿಗೆ ಶರಣಾಯಿತು.

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಕಳಪೆ ಪ್ರದರ್ಶನ ಹೊಂದಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬಲವಾಗಿ ಪುನರಾಗಮನ ಮಾಡಿದರು.
ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಟಾಮ್ ಹಾರ್ಟ್ಲಿ ಏಳು ವಿಕೆಟ್‌ಗಳನ್ನು ಪಡೆದು ಆತೀಥೆಯ ತಂಡವನ್ನು ಬೆಚ್ಚಿ ಬೀಳಿಸಿದರು. ಇನ್ನು ಬ್ಯಾಟಿಂಗ್‌ನಲ್ಲಿ ಒಲ್ಲಿ ಪೋಪ್ ಅಮೋಘ 196 ರನ್ ಗಳಿಸಿದರು.
ಈ ಸೋಲಿನ ಪರಿಣಾಮವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ ತಂಡ ಎರಡನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದೆ. ಬಾಂಗ್ಲಾದೇಶ ತಂಡಕ್ಕಿಂತ ಕೆಳಗಿಳಿದಿರುವುದು ಗಮನಾರ್ಹವಾಗಿದೆ.
ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದ್ದ ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು. ನಂತರ, ಆಸ್ಟ್ರೇಲಿಯಾ ತಂಡವು ಪಾಕಿಸ್ತಾನವನ್ನು 3-0 ಅಂತರದಿಂದ ಸೋಲಿಸಿ ಭಾರತವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿತು.
ಆದರೆ, ಇದೀಗ ಹೈದರಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ನಂತರ, ಭಾರತ ತಂಡ ಐದನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ನಾಲ್ಕು ಪಂದ್ಯಗಳಲ್ಲಿ ಗೆದ್ದು ಮತ್ತೆ ಅಗ್ರಸ್ಥಾನಕ್ಕೇರಲು ಎದುರು ನೋಡುತ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ರೋಚಕವಾಗಿ 8 ರನ್‌ಗಳಿಂದ ಸೋತರೂ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಆಸೀಸ್ ಗೆಲುವಿನ ಶೇಕಡಾವಾರು 55ರಷ್ಟು ಹೊಂದಿದ್ದರೆ, ದಕ್ಷಿಣ ಆಫ್ರಿಕಾ ಶೇಕಡಾ.50ರಷ್ಟು ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿದೆ.
ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದ್ದು, ಬಾಂಗ್ಲಾದೇಶ ಮತ್ತು ಭಾರತ ಶೇಕಡಾ ಶೇ.43.33ರಷ್ಟು ಗೆಲುವು ಮತ್ತು 26 ಅಂಕಗಳನ್ನು ಪಡೆದು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಪಾಕಿಸ್ತಾನ ತಂಡವು ಆರನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನವನ್ನು ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಪಡೆದಿವೆ.
ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಸೋತ ನಂತರ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ಸೋತ ಬಳಿಕ ನವೀಕರಿಸಿದ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಇಲ್ಲಿದೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಪುನರಾಗಮನ ಮಾಡಲು ಇನ್ನೂ ನಾಲ್ಕು ಟೆಸ್ಟ್‌ಗಳು ಬಾಕಿ ಉಳಿದಿವೆ. ಟೀಮ್ ಇಂಡಿಯಾ ಮೆಚ್ಚಿನ ತಂಡವಾಗಿ ಸರಣಿ ಪ್ರಾರಂಭಿಸಿತು. ಆದರೆ ತವರಿನಲ್ಲಿ ಗೆಲುವಿನ ಹಾದಿಗೆ ಮರಳಲು ಎದುರು ನೋಡುತ್ತಿರುವಾಗ ಭಾರತದ ಮೇಲೆ ಮತ್ತೆ ಒತ್ತಡವಿದೆ. ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 2ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ.
2ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಯಾವ ಬದಲಾವಣೆ ಮಾಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ರವೀಂದ್ರ ಜಡೇಜಾ ಅವರ ಬದಲಾಗಿ ಕುಲದೀಪ್ ಯಾದವ್‌ಗೆ ಸ್ಥಾನ ಸಿಗಬಹುದು. ರವೀಂದ್ರ ಜಡೇಜಾ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಜಡೇಜಾ ತಮ್ಮ ಮಂಡಿರಜ್ಜು ಸೆಳೆತಕ್ಕೆ ತುತ್ತಾದರು.
ರವೀಂದ್ರ ಜಡೇಜಾ ಅವರು ಗಾಯದಿಂದ ಚೇತರಿಸಿಕೊಂಡು ಮುಂದಿನ ಪಂದ್ಯವನ್ನು ಆಡುವರೇ ಎಂಬುದು ಅನುಮಾನ ಮೂಡಿಸಿದೆ. ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ಉತ್ತಮ ಬದಲಿಯಾಗಿದ್ದಾರೆ. ಎರಡನೇ ಟೆಸ್ಟ್ ಪಂದ್ಯಕ್ಕೂ ವಿರಾಟ್ ಕೊಹ್ಲಿ ಲಭ್ಯವಿಲ್ಲ ಎಂಬುದು ತಿಳಿದುಕೊಳ್ಳಬೇಕಾದ ವಿಷಯ. ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ಅವರು ವಾಪಸಾಗುವ ಸಾಧ್ಯತೆ ಇದೆ.