WTC Final 2023: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ಆಸ್ಟ್ರೇಲಿಯಾ; ಯಾವ ತಂಡಕ್ಕೆ ಎಷ್ಟು ಬಹುಮಾನ?
ಭಾನುವಾರ, ಜೂನ್ 11ರಂದು ಲಂಡನ್‌ನ ಓವಲ್‌ನಲ್ಲಿ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್ ತಂಡವಾದ ಭಾರತವನ್ನು 209 ರನ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ತನ್ನ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ತಮ್ಮ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ನಂತರ ಆಸ್ಟ್ರೇಲಿಯಾ ತಂಡ ಭಾರೀ ಬಹುಮಾನವನ್ನು ಪಡೆದುಕೊಂಡಿತು. ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸೀಸ್ ಪಡೆ 1.6 ಮಿಲಿಯನ್ ಡಾಲರ್ (13.23 ಕೋಟಿ ರೂಪಾಯಿ) ಬಹುಮಾನದ ಹಣವನ್ನು ಜೇಬಿಗಿಳಿಸಿತು.

ಇನ್ನು ರನ್ನರ್-ಅಪ್ ಸ್ಥಾನ ಪಡೆಯುವ ಮೂಲಕ ಭಾರತ ತಂಡವು 800,000 ಡಾಲರ್ (6.61 ಕೋಟಿ ರೂಪಾಯಿ) ಬಹುಮಾನದ ಮೊತ್ತಕ್ಕೆ ತೃಪ್ತಿ ಕಂಡಿತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಮೀಸಲಾಗಿರುವ ಒಟ್ಟು 3.8 ಮಿಲಿಯನ್ ಡಾಲರ್ ಮೊತ್ತವನ್ನು ಭಾಗವಹಿಸಿದ ಎಲ್ಲಾ ತಂಡಗಳ ನಡುವೆ ಹಂಚಲಾಗುತ್ತದೆ.
ವಿಶ್ವ ಟೆಸ್ಟ್ ಚಾಂಪಿಯನ್‌ನ ಅಂಕಪಟ್ಟಿಯ ಪ್ರಕಾರ, ತಮ್ಮ ಎಲ್ಲಾ ಪಂದ್ಯಗಳನ್ನು ಆಡಿದ ನಂತರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟ ದಕ್ಷಿಣ ಆಫ್ರಿಕಾ 450,000 ಡಾಲರ್ ಹಣ ಪಡೆದುಕೊಂಡಿದೆ.
ಇನ್ನು ಇಂಗ್ಲೆಂಡ್ ತಂಡ ಬಹಳ ಹಿಂದೆಯೇ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ರೇಸ್‌ನಿಂದ ಹೊರಗುಳಿದಿತ್ತು. ಆದರೆ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡ ನಾಲ್ಕನೇ ಸ್ಥಾನ ಪಡೆದು 350,000 ಡಾಲರ್ ಹಣ ಬಹುಮಾನವನ್ನು ಗೆದ್ದರೆ, ಐದನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡ 200,000 ಬಹುಮಾನ ಪಡೆದಿದೆ.

ನಂತರದ ಸ್ಥಾನ ಪಡೆದಿರುವ ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳು ತಲಾ 100,000 ಡಾಲರ್ ಹಣ ಬಹುಮಾನವನ್ನು ಗಳಿಸಿವೆ.
ಗೆಲುವಿಗೆ ದಾಖಲೆಯ 444 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಭಾರತ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ 160 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಐದನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಭೋಜನ ವಿರಾಮಕ್ಕೂ ಮೊದಲೇ 24 ಓವರ್‌ಗಳಲ್ಲಿ 70 ರನ್‌ಗಳಿಗೆ ಉಳಿದ ಏಳು ವಿಕೆಟ್‌ಗಳನ್ನು ಕಳೆದುಕೊಂಡು 234 ರನ್‌ಗಳಿಗೆ ಸರ್ವಪತನ ಕಂಡಿತು.
ದಶಕದ ನಂತರ ಐಸಿಸಿ ಪ್ರಶಸ್ತಿ ಗೆಲ್ಲುವ ಭರವಸೆ ಹೊಂದಿದ್ದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಮತ್ತೊಮ್ಮೆ ನಿರಾಸೆ ಮೂಡಿಸಿತು. ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಮುಗ್ಗರಿಸಿತು. ಇನ್ನು ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications