ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೂಡ ಮುಕ್ತಾಯವಾಗಿರುವ ಕಾರಣ ಕ್ರಿಕೆಟ್ ಪ್ರೇಮಿಗಳ ಸಂಪೂರ್ಣ ಚಿತ್ತ ಈ ಟೆಸ್ಟ್ ಮಾದರಿಯ ಅತ್ಯುನ್ನತ ಪಂದ್ಯದ ಮೇಲೆ ನೆಟ್ಟಿದೆ. ಈ ಪಂದ್ಯಕ್ಕೆ ಎರಡು ತಂಡಗಳ ಬಹುತೇಕ ಆಟಗಾರರು ಇಂಗ್ಲೆಂಡ್‌ಗೆ ಬಂದಿಳಿದಿದ್ದು ಸಿದ್ಧತೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆಸಿಸ್ ತಂಡದ ವೇಗಿ ಜೋಶ್ ಹೇಜಲ್‌ವುಡ್ ಪ್ರತಿಕ್ರಿಯೆ ನೀಡಿದ್ದು ಮಹತ್ವದ ಪಂದ್ಯಕ್ಕೆ ತನ್ನ ಲಭ್ಯತೆಯ ವಿಚಾರವಾಗಿ ಪ್ರಮುಖ ಹೇಳಿಕೆ ನೀಡಿದ್ದಾರೆ.
ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ತಾನು ಸಿದ್ಧವಾಗಲಿದ್ದೇನೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಜೋಶ್ ಹೇಜಲ್‌ವುಡ್.

ಇನ್ನು ಜೋಶ್ ಹೇಜಲ್‌ವುಡ್ ಟೆಸ್ಟ್ ಮಾದರಿಯಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿದಿರುವುದು ಕಳೆದ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ. ಅದಾದ ಬಳಿಕ ಭಾರತದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದಲೂ ಹೇಜಲ್‌ವುಡ್ ಸಂಪೂರ್ಣವಾಗಿ ಹೊರಗುಳಿದಿದ್ದರು. ನಂತರ ಐಪಿಎಲ್‌ನಲ್ಲಿ ಭಾಗವಹಿಸಿದ್ದ ಜೋಶ್ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರವೇ ಆಡಿದ್ದು 9 ಓವರ್‌ಗಳ ಬೌಲಿಂಗ್ ಮಾತ್ರ ನಡೆಸಿದ್ದರು. ನಂತರ ಲೀಗ್ ಹಂತದಲ್ಲಿ ಆರ್‌ಸಿಬಿ ತಂಡದ ಪಂದ್ಯ ಕೊನೆಗೊಳ್ಳುವ ಮುನ್ನವೇ ತಂಡವನ್ನು ತೊರೆದು ಆಸ್ಟ್ರೇಲಿಯಾಗೆ ಮರಳಿದ್ದರು.
ಈ ಬೆಳವಣಿಗೆ ಜೋಶ್ ಹೇಜಲ್‌ವುಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿಯೂ ಹೇಜಲ್‌ವಿಡ್ ಭಾಗವಹಿಸುವ ಬಗ್ಗೆ ಅನುಮಾನಗಳು ಏಳುವಂತೆ ಮಾಡಿದೆ. ಆದರೆ ಇದೀಗ ಸ್ವತಃ ಜೋಶ್ ಹೇಜಲ್‌ವುಡ್ ಈ ಬಗ್ಗೆ ಪ್ರತಿಕ್ರಿಯೆ ನಿಡಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ತಾನು ಸಿದ್ಧವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ಸ್ಕ್ವಾಡ್ ಹೀಗಿದೆ: ರೋಹಿತ್ ಶರ್ಮಾ(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಕೆಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಯ್‌ದೇವ್ ಉನಾದ್ಕಟ್, ಇಶಾನ್ ಕಿಶನ್(ವಿಕೆಟ್ ಕೀಪರ್)
ಆಸ್ಟ್ರೇಲಿಯಾ ಸ್ಕ್ವಾಡ್: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೊಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಮಿಚ್ ಮಾರ್ಷ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾ, ಸ್ಟೀವ್ ಸ್ಮಿತ್, ಸ್ಟೀವ್ ಸ್ಮಿತ್ , ಡೇವಿಡ್ ವಾರ್ನರ್.