WTC Final: ಈ ಬಾರಿ ನಾವು ಗೆಲುವಿನ ಗೆರೆ ದಾಟಲಿದ್ದೇವೆ: ವಿಶ್ವಾಸ ವ್ಯಕ್ತಪಡಿಸಿದ ಪೂಜಾರ
ಕಳೆದ ಒಂದು ದಶಕದಿಂದ ಭಾರತ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬ ನೋವು ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇದೀಗ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲುವ ಅವಕಾಶ ಭಾರತದ ಮುಂದಿದ್ದು ಈ ಬಾರಿ ಗೆಲುವಿನ ಗೆರೆ ದಾಟಲಿದ್ದೇವೆ ಎಂಬ ವಿಶ್ವಾಸವನ್ನು ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ವ್ಯಕ್ತಪಡಿಸಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಬುಧವಾರದಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇಂಗ್ಲೆಂಡ್‌ನ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಬಲಿಷ್ಠ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿಯುತ್ತಿದ್ದು ಟೆಸ್ಟ್ ಮಾದರಿಯಲ್ಲಿ ಚಾಂಪಿಯನ್‌ಪಟ್ಟಕ್ಕಾಗಿ ಕಾದಾಟ ನಡೆಸಲಿದೆ. ಟೀಮ್ ಇಂಡಿಯಾ ಸತತ ಎರಡಬೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರೆ ಭಾರತ ಎರಡನೇ ಬಾರಿಗೆ ಅಗ್ನಿಪರೀಕ್ಷೆಗೆ ಇಳಿದಿದೆ. ಮೊದಲ ಆವೃತ್ತಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲಂಡ್ ತಂಡಕ್ಕೆ ಶರಣಾಗಿತ್ತು.

ಟೀಮ್ ಇಂಡಿಯಾದ ಆಟಗಾರರಾದ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಐಪಿಎಲ್ ಟೂರ್ನಿಯ ಪ್ಲೇಆಫ್ ಪಂದ್ಯಗಳ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿ ಅಲ್ಲಿನ ವಾತಾವರಣದಲ್ಲಿ ಅಭ್ಯಾಸ ಆರಂಭಿಸಿದ್ದರು. ಇನ್ನು ಪ್ಲೇಆಫ್‌ನಲ್ಲಿ ಭಾಗವಹಿಸಿದ್ದ ಆಟಗಾರರಾದ ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಶುಬ್ಮನ್ ಗಿಲ್, ರವಿಂದ್ರ ಜಡೇಜಾ, ಮೊಹಮ್ಮದ್ ಶಮಿ ಮೊದಲಾದ ಆಟಗಾರರು ವಾರದ ಹಿಂದೆಯಷ್ಟೇ ತಂಡವನ್ನು ಸೇರಿಕೊಂಡಿದ್ದಾರೆ.
ಆದರೆ ಉಳಿದೆಲ್ಲಾ ಆಟಗಾರರಿಗಿಂತಲೂ ಭಿನ್ನವಾಗಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಇಂಗ್ಲೆಂಡ್‌ನಲ್ಲಿ ಕಳೆದ ಎರಡು ತಿಂಗಳಿನಿಂದ ಇದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಸಿದ್ಧತೆ ನಡೆಸಿದ್ದಾರೆ. ಪೂಜಾರ ಐಪಿಎಲ್ ಒಪ್ಪಂದ ಹೊಂದಿಲ್ಲದ ಕಾರಣ ಅವರು ಕೌಂಟಿ ಕ್ರಿಕೆಟ್‌ನಲ್ಲಿ ಆಡಿದ್ದು ಈ ಮೂಲಕ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅಭ್ಯಾಸ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು ತಂಡದ ಒಟ್ಟಾರೆ ಸಿದ್ಧತೆಯ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.
"ನಾವೆಲ್ಲಾ ಬಹಳ ಅದ್ಭುತವಾದ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಹಾಗಾಗಿ ಈ ಬಾರಿ ಗೆಲುವಿನ ಗೆರೆ ದಾಟುವ ವಿಶ್ವಾಸವನ್ನು ಹೊಂದಿದ್ದೇವೆ" ಎಂದಿದ್ದಾರೆ ಚೇತೇಶ್ವರ್ ಪೂಜಾರ. ಐಸಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೂಜಾರ, "ಇಲ್ಲಿ ಹೆಚ್ಚಿನ ಆಟಗಾರರು ಸಾಕಷ್ಟು ಪ್ರಮಾಣದಲ್ಲಿ ಕ್ರಿಕೆಟ್ ಆಡಿದ್ದೇವೆ. ಕೆಲವರು ಕೌಂಟಿ ಕ್ರಿಕೆಟ್‌ನಲ್ಲಿಯೂ ಭಾಗವಹಿಸಿದ್ದೇವೆ. ಆ ಅನುಭವ ನಿಮಗೆ ಅಗತ್ಯವಾಗಿದೆ. ನಮಗೆ ಒಬ್ಬರಿಗೊಬ್ಬರ ಸಾಮರ್ಥ್ಯದ ಅರಿವಿದೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ ನಾವು ಸಾಕಷ್ಟು ಪ್ರಮಾಣದಲ್ಲಿ ಕ್ರಿಕೆಟ್ ಆಡಿದ್ದೇವೆ. ಹಾಗಾಗಿ ಎದುರಾಳಿ ತಂಡದಿಂದ ಏನನ್ನು ನಿರೀಕ್ಷಿಸಬಹುದು ಎಂಬುದರ ಅರಿವು ನಮಗಿದೆ" ಎಂದಿದ್ದಾರೆ ಚೇತೇಶ್ವರ್ ಪೂಜಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications