
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಶ್ರೀಲಂಕಾ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಬಳಿಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆದುಕೊಂಡಿತು. ಅಹಮದಾಬಾದ್ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾದ ಬಳಿಕ ಭಾರತ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.
ಇಂಗ್ಲೆಂಡ್‌ನ ಓವಲ್‌ನಲ್ಲಿ ಜೂನ್ 7ರಿಂದ ಫೈನಲ್ ಪಂದ್ಯ ಆರಂಭವಾಗಲಿದೆ. ಭಾರತ ಆಸ್ಟ್ರೇಲಿಯಾ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಹಣಾಹಣಿ ನಡೆಸಲಿವೆ. ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಭಾರತ ಈ ಬಾರಿ ಚಾಂಪಿಯನ್ ಆಗುವ ಉತ್ಸಾಹದಲ್ಲಿದೆ. ತವರಿನಲ್ಲಿ ನಡೆದ ಸರಣಿಯನ್ನು ಗೆದ್ದುಕೊಂಡಿರುವ ಭಾರತಕ್ಕೆ ವಿದೇಶದಲ್ಲಿ ಫೈನಲ್ ನಡೆಯುತ್ತಿರುವುದು ದೊಡ್ಡ ಸವಾಲಾಗಿದೆ.
ಜಸ್ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್ ಅನುಪಸ್ಥಿತಿ ಭಾರತ ತಂಡವನ್ನು ಹೆಚ್ಚಾಗಿ ಕಾಡಲಿದೆ. ಇಂಗ್ಲೆಂಡ್‌ನ ಪರಿಸ್ಥಿತಿಯಲ್ಲಿ ಇವರಿಬ್ಬರೂ ಭಾರತ ತಂಡಕ್ಕೆ ಪ್ರಮುಖ ಆಟಗಾರರಾಗಿದ್ದರು. ರಿಷಬ್ ಪಂತ್ ಬದಲಾಗಿ ಸದ್ಯ ಭಾರತ ತಂಡದಲ್ಲಿ ಕೆಎಸ್ ಭರತ್ ಸ್ಥಾನ ಪಡೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೆಎಸ್ ಭರತ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಕೊನೆಯ ಪಂದ್ಯದಲ್ಲಿ 44 ರನ್ ಗಳಿಸಿದ್ದು ಬಿಟ್ಟರೆ ಮೊದಲ ಮೂರು ಟೆಸ್ಟ್‌ಗಳಲ್ಲಿ ವಿಫಲರಾದರು, ಕೀಪಿಂಗ್‌ನಲ್ಲಿ ಕೂಡ ಹಲವು ಪ್ರಮುಖ ಅವಕಾಶಗಳನ್ನು ಕೈಚೆಲ್ಲಿದರು.

ಫೈನಲ್ ಪಂದ್ಯದಲ್ಲಿ ರಾಹುಲ್‌ಗೆ ಅವಕಾಶ ನೀಡಿ
ಭಾರತದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಕೆಎಸ್ ಭರತ್ ಬದಲಾಗಿ ಕೆಎಲ್ ರಾಹುಲ್ ಕಣಕ್ಕಿಳಿಯಬೇಕು ಎಂದು ಹೇಳಿದ್ದಾರೆ. ರಾಹುಲ್‌ರ ಬ್ಯಾಟಿಂಗ್ ಸಾಮರ್ಥ್ಯವನ್ನು ಪರಿಗಣಿಸಿ ಅವರನ್ನು ವಿಕೆಟ್ ಕೀಪರ್-ಬ್ಯಾಟರ್ ಆಗಿ ಕಣಕ್ಕಿಳಿಸಿ ಎಂದು ಗವಾಸ್ಕರ್ ಹೇಳಿದ್ದಾರೆ.
"ನೀವು ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್ ಆಗಿ ನೋಡಬಹುದು. ಓವಲ್ ಅಂಗಳದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ, ಭಾರತದ ಬ್ಯಾಟಿಂಗ್ ಬಲವಾಗಿರುತ್ತದೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ರಾಹುಲ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ರಾಹುಲ್ ಶತಕ ಗಳಿಸಿದ್ದಾರೆ. ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವಾಗ ಕೆಎಲ್ ರಾಹುಲ್ ನಿಮ್ಮ ಗಮನದಲ್ಲಿರಲಿ" ಎಂದು ಗವಾಸ್ಕರ್ ಹೇಳಿದ್ದಾರೆ.

ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗದ ರಾಹುಲ್
ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ವಿಫಲವಾದ ನಂತರ ಮೂರು ಮತ್ತು ನಾಲ್ಕನೇ ಟೆಸ್ಟ್‌ಗಾಗಿ ಕೆಎಲ್ ರಾಹುಲ್‌ರನ್ನು ತಂಡದಿಂದ ಕೈಬಿಡಲಾಯಿತು. ಕಳೆದ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ರಾಹುಲ್ 30ಕ್ಕಿಂತ ಹೆಚ್ಚಿನ ರನ್ ಗಳಿಸಲೂ ಕೂಡ ವಿಫಲವಾಗಿದ್ದಾರೆ.
ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಮೂರು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ರಾಹುಲ್ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಕೆಎಸ್ ಭರತ್ ಕೀಪಿಂಗ್‌ನಲ್ಲಿ ಸಾಕಷ್ಟು ಎಡವಿರುವುದರಿಂದ ಫೈನಲ್‌ನಲ್ಲಿ ಭರತ್ ಬದಲಾಗಿ ರಾಹುಲ್‌ರನ್ನು ಆಯ್ಕೆ ಮಾಡುವ ಸಾಧ್ಯತೆಯನ್ನು ತಳ್ಳುಹಾಕುವಂತಿಲ್ಲ. ರಾಹುಲ್ ಅದಕ್ಕೂ ಮುನ್ನ ಬ್ಯಾಟಿಂಗ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ.