WTC Final: ಆಸ್ಟ್ರೇಲಿಯಾವನ್ನು ಭಾರತ ಮಣಿಸಿದರೆ ಖುಷಿಯಾಗಲಿದೆ ಎಂದ ಇಂಗ್ಲೆಂಡ್ ಸ್ಟಾರ್
ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಮಣಿಸುವುದನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ. ಆಸ್ಟ್ರೇಲಿಯಾ ತಂಡದ ಬಲಿಷ್ಠ ವೇಗದ ಬೌಲಿಂಗ್ ವಿಭಾಗದ ಕಾರಣದಿಂದಾಗಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಆದರೆ ಅದನ್ನು ಭಾರತ ಸೋಲಿಸಿದರೆ ನನಗೆ ಖುಷಿಯಾಗಲಿದೆ ಎಂದಿದ್ದಾರೆ ಸ್ವಾನ್.
ಜೂನ್ 7ರಿಂದ ಲಂಡನ್‌ನ ಓವಲ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಡಲಿದೆ. ಈ ಚಾಂಪಿಯನ್ಸ್‌ಶಿಪ್ ಫೈನಲ್ ಪಂದ್ಯದ ಬಳಿಕ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಆಶಸ್ ಸರಣಿಯಲ್ಲಿ ಭಾಗಿಯಾಗಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟದೊಂದಿಗೆ ಇಂಗ್ಲೆಂಡ್ ತಂಡವನ್ನು ಎದುರಿಸುವುದನ್ನು ನೋಡಲು ಬಯಸುವುದಿಲ್ಲ ಎಂದಿದ್ದಾರೆ.

"ಗೆಲ್ಲಲು ಯಾರ ನೆಚ್ಚಿನ ತಂಡ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗ ಅವರನ್ನು ಗೆಲ್ಲುವ ನೆಚ್ಚಿನ ತಂಡ ಎಂಬ ಸ್ಥಾನದಲ್ಲಿ ಕೂರಿಸುತ್ತದೆ. ಈ ಸಂದರ್ಭದಲ್ಲಿ ಪಿಚ್ ಕೂಡ ಬಹಳ ಅದ್ಭುತವಾಗಿದೆ. ವೇಗಿಗಳು ಇಲ್ಲಿ ಆರಂಭದಲ್ಲಿ ಯಶಸ್ಸು ಸಾಧಿಸಬಹುದು" ಎಂದಿದ್ದಾರೆ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಎಷ್ಟು ವೇಗಿಗಳೊಂದಿಗೆ ಕಣಕ್ಕಿಳಿಯಬೇಕು ಎಂಬುದು ಪ್ರಶ್ನೆಯಾಗಿದೆ. ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡಬೇಕಾ ಅಥವಾ ಓರ್ವ ಸ್ಪಿನ್ನರ್ ಹಾಗೂ ನಾಲ್ಕು ವೇಗಿಗಳನ್ನು ಕಣಕ್ಕಿಳಿಸಬೇಕಾ ಎಂಬುದು ಪ್ರಶ್ನೆಯಾಗಿದೆ. ಅಂದರೆ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಉಮೇಶ್ ಯಾದವ್ ಈ ಇಬ್ಬರ ಪೈಕಿ ಒಬ್ಬರಿಗೆ ಮಾತ್ರವೇ ಆಡುವ ಬಳಗದಲ್ಲಿ ಅವಕಾಶ ದೊರೆಯಲಿದೆ. ಇದು ಕೂಡ ತಂಡದ ನಾಯಕನಿಗೆ ದೊಡ್ಡ ಗೊಂದಲವಾಗಿದೆ.
ಇನ್ನು ಈ ಸಂದರ್ಭದಲ್ಲಿ ತಂಡಕ್ಕೆ ನಿಜಕ್ಕೂ ಕಾಡುತ್ತಿರುವುದು ಆಲ್‌ರೌಂಡರ್ ವೇಗಿಯ ಕೊರತೆ. ಇಂಗ್ಲೆಂಡ್‌ನ ಬೌನ್ಸಿ ಪಿಚ್‌ಗಳಲ್ಲಿ ವೇಗದ ಬೌಲಿಂಗ್ ವಿಭಾಗದ ಪಾತ್ರ ನಿರ್ಣಾಯವಾಗಿರಲಿದೆ. ತಂಡದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಮಧ್ಯೆ ಹೊಂದಾಣಿಕೆಗಾಗಿ ಮಧ್ಯಮ ಕ್ರಮಾಂಕದಲ್ಲಿ ವೇಗದ ಬೌಲಿಂಗ್ ಆಟಗಾರನ ಪಾತ್ರ ಮಹತ್ವ ಪಡೆದುಕೊಳ್ಳುತ್ತದೆ. ಇನ್ನು ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಇಬ್ಬರು ಕೂಡ ಸ್ಪಿನ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ವಿಭಾಗದ ಬಲವನ್ನು ಕೂಡ ಹೆಚ್ಚಿಸಲಿದ್ದಾರೆ ಎಂಬುದು ಗಮನಾರ್ಹ. ಈ ಎಲ್ಲಾ ಲೆಕ್ಕಾಚಾರಗಳನ್ನು ನೋಡಿಕೊಂಡು ನಾಯಕ ರೋಹಿತ್ ಶರ್ಮಾ ಹಾಗೂ ಮ್ಯಾನೇಜ್‌ಮೆಂಟ್‌ನ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ.
ಇತ್ತಂಡಗಳ ಸಂಭಾವ್ಯ ಆಡುವ ಬಳಗ
ಆಸ್ಟ್ರೇಲಿಯಾ ಸಂಭಾವ್ಯ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವ್ ಸ್ಮಿತ್, ಟ್ರೆವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಬೋಲ್ಯಾಂಡ್, ನಥನ್ ಲಿಯಾನ್
ಟೀಮ್ ಇಂಡಿಯಾ ಸಂಭಾವ್ಯ ಆಡುವ ಬಳಗ: ರೋಹಿತ್ ಶರ್ಮಾ(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಆರ್ ಎ ಜಡೇಜಾ, ಆರ್ ಅಶ್ವಿನ್, ಇಶಾನ್ ಕಿಶನ್(ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications