ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 2ನೇ ದಿನದಾಟ ಅಂತ್ಯವಾಗಿದ್ದು ಟೀಮ್ ಇಂಡಿಯಾ ಬಹಳ ದೊಡ್ಡ ಸಂಕಷ್ಟದಲ್ಲಿದೆ. ಆಸ್ಟ್ರೇಲಿಯಾ ಗಳಿಸಿದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಲು ಕಣಕ್ಕಿಳಿದಿರುವ ಭಾರತ ತಂಡ ಎರಡನೇ ದಿನದಾಟದ ಅಂತ್ಯದಲ್ಲಿ 151 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಸ್ಟೀವ್ ಸ್ಮಿತ್ ಹಾಗೂ ಟ್ರೆವಿಸ್ ಹೆಡ್ ಅವರ ಅಮೋಘ ಜೊತೆಯಾಟದಿಂದ ದೊಡ್ಡ ಮೊತ್ತ ಪೇರಿಸಲು ಆಸ್ಟ್ರೇಲಿಯಾ ತಂಡ ಯಶಸ್ವಿಯಾದರೂ ಈ ಜೋಡಿಯನ್ನು ಬೇರ್ಪಡಿಸಿದ ಬಳಿಕ ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ಯಶಸ್ಸು ಸಾಧಿಸಿತು.

ಮೊದಲ ದಿನದಾಟದ ಅಂತ್ಯದಲ್ಲಿ ಆಸ್ಟ್ರೇಲಿಯಾ ತಂಡ ಕೇವಲ ಮೂರು ವಿಕೆಟ್ ಕಳೆದುಕೊಂಡು 327 ರನ್‌ಗಳನ್ನು ಗಳಿಸಿದಲ್ಲಿಂದ ಎರಡನೇ ದಿನದಾಟವನ್ನು ಆರಂಭಿಸಿತು. ಮೊದಲ ದಿದಾಟದ ಅಂತ್ಯದಲ್ಲಿ 95 ರನ್‌ಗಳಿಸಿದ್ದ ಸ್ಟೀವ್ ಸ್ಮಿತ್ ಇಂದು ತಾವು ಎದುರಿಸಿದ ಎರಡು ಎಸೆತಗಳಲ್ಲಿಯೇ ಶತಕವನ್ನು ಪೂರ್ಣಗೊಳಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಮಿತ್ 31ನೇ ಶತಕವನ್ನು ಬಾರಿಸಿದ್ದಾರೆ.
ಇನ್ನು ಟ್ರೆವಿಸ್ ಹೆಡ್ ಈ ಪಂದ್ಯದಲ್ಲಿ 163 ರನ್‌ಗಳಿಸಿದಾಗ ತಮ್ಮ ವಿಕೆಟ್ ಕಳೆದುಕೊಳ್ಳುವ ಮೂಲಕ ಈ ಬೃಹತ್ ಜೊತೆಯಾಟ ಮುರಿದು ಬಿತ್ತು. ನಂತರ ಬಂದ ಗ್ರೀನ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಬಳಿಕ ಸ್ಟೀವ್ ಸ್ಮಿತ್ ಶಾರ್ದೂಲ್ ಠಾಕೂರ್‌ಗೆ 121 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಅಲೆಕ್ಸ್ ಕ್ಯಾರಿ 48 ರನ್‌ಗಳ ಕೊಡುಗೆ ನೀಡಿದರು. ಉಳಿದಂತೆ ಎಲ್ಲಾ ಆಟಗಾರರು ಕೂಡ ಒಂದಂಕಿಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸನ್ನು 469 ರನ್‌ಗೆ ಅಂತ್ಯಗೊಳಿಸಿತು.
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಭಾರತ ತಂಡ ಉತ್ತಮ ಪ್ರದರ್ಶನ ನೀಡುವ ಮುನ್ಸೂಚನೆ ನೀಡಿ ಬಳಿಕ ಹಠಾತ್ ಕುಸಿತಕ್ಕೆ ಒಳಗಾಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಂಡು ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರು. ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಕೂಡ ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಇನ್ನು ನಂತರ ಜೊತೆಯಾದ ಅಜಿಂಕ್ಯಾ ರಹಾನೆ ಹಾಗೂ ರವೀಂದ್ರ ಜಡೇಜಾ ಉತ್ತಮ ಜೊತೆಯಾಟದ ಮೂಲಕ ಚೇತರಿಕೆ ನೀಡುವ ಪ್ರಯತ್ನದಲ್ಲಿದ್ದಾಗ ಈ ಜೋಡಿಯನ್ನು ಕೂಡ ಆಸಿಸ್ ಸ್ಪಿನ್ನರ್ ನಥನ್ ಲಿಯಾನ್ ಬೇರ್ಪಡಿಸಿದರು. 48 ರನ್‌ಗಳಿಸಿದ್ದ ಜಡೇಜಾ ಅವರನ್ನು ಲಿಯಾನ್ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
ಅಜಿಂಕ್ಯಾ ರಹಾನೆ 29 ರನ್‌ಗಳಿಸಿ ಅಜೇಯವಾಗುಳಿದಿದ್ದು ಶ್ರೀಕರ್ ಭರತ್ 5 ರನ್‌ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ. ಈ ಜೋಡಿ ಟೀಮ್ ಇಂಡಿಯಾದ ಕೊನೆಯ ಆಸರೆಯಾಗಿದ್ದು ಎಷ್ಟರ ಮಟ್ಟಿಗೆ ಹೋರಾಟ ನೀಡಲಿದೆ ಎಂಬುದು ಕಾದು ನೋಡಬೇಕಿದೆ. ಹೀಗಾಗಿ ಮೂರನೇ ದಿನದಾಟ ಭಾರತದ ಪಾಲಿಗೆ ಅತ್ಯಂತ ಕಠಿಣವಾಗಿರುವುದರಲ್ಲಿ ಅನುಮಾನವಿಲ್ಲ.
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಮಾರ್ಕಸ್ ಹ್ಯಾರಿಸ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್