WTC Final : ಭಾರತದ 10 ವರ್ಷಗಳ ಐಸಿಸಿ ಟ್ರೋಫಿ ಬರ ನೀಗುತ್ತಾ: ಓವಲ್ ಅಂಗಳದಲ್ಲಿ ಇತಿಹಾಸ ನಿರ್ಮಿಸ್ತಾರ ರೋಹಿತ್ ಪಡೆ?
ಬಹು ನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಣಾಹಣಿಗೆ ಕ್ಷಣಗಣನೆ ಆರಂಭವಾಗಿದೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಅಂಗಳದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರತಿಷ್ಠಿತ ಕಪ್‌ಗಾಗಿ ಸೆಣೆಸಾಟ ನಡೆಸಲಿವೆ. ಜೂನ್ 7 ರಿಂದ 11ರವರೆಗೆ ನಡೆಯುವ ಟೆಸ್ಟ್ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ.
ಎರಡೂ ತಂಡಗಳು ಇತಿಹಾಸ ನಿರ್ಮಿಸಲು ತುದಿಗಾಲಲ್ಲಿ ನಿಂತಿವೆ. ಕಳೆದ ಬಾರಿ ಫೈನಲ್ ತಲುಪಿ ಸೋಲು ಕಂಡಿದ್ದ ಭಾರತ ಸತತ ಎರಡನೇ ಬಾರಿ ಕೂಡ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದು ಈ ಬಾರಿ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಆಸ್ಟ್ರೇಲಿಯಾ ಕೂಡ ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

ಈಗಾಗಲೇ ಎರಡೂ ತಂಡಗಳು ಭರ್ಜರಿ ಅಭ್ಯಾಸ ನಡೆಸಿದ್ದು, ಅಂತಿಮ ಸಿದ್ಧತೆ ಮಾಡಿಕೊಂಡಿವೆ. ಓವಲ್ ಪಿಚ್ ಹೇಗೆ ವರ್ತಿಸುತ್ತದೆ ಎನ್ನುವುದು ಇನ್ನೂ ನಿಗೂಢವಾಗಿರುವುದರಿಂದ ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ತೆಗೆದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ.
ಎರಡೂ ತಂಡಗಳಿಗೆ ಆಟಗಾರರ ಗಾಯದ ಸಮಸ್ಯೆ
ಮಹತ್ವದ ಪಂದ್ಯದಲ್ಲಿ ಉಭಯ ತಂಡಗಳಿಗೂ ಪ್ರಮುಖ ಆಟಗಾರರ ಗಾಯದ ಸಮಸ್ಯೆ ಕಾಡಲಿದೆ. ಆಸ್ಟ್ರೇಲಿಯಾದ ಪ್ರಮುಖ ವೇಗಿ ಜೋಶ್ ಹೇಝಲ್‌ವುಡ್ ಗಾಯಗೊಂಡು ಫೈನಲ್‌ನಿಂದ ಹೊರುಗುಳಿದಿದ್ದಾರೆ, ಅವರ ಬದಲಾಗಿ ಸ್ಕಾಟ್ ಬೋಲ್ಯಾಂಡ್ ಅವರನ್ನು ಆಯ್ಕೆ ಮಾಡಲಾಗಿದೆ.
ಭಾರತ ತಂಡದಲ್ಲಿ ಕೂಡ ಪ್ರಮುಖ ಆಟಗಾರರು ಅಲಭ್ಯರಾಗಿದ್ದಾರೆ. ರಿಷಬ್ ಪಂತ್ ತಂಡದಲ್ಲಿ ಇರುವುದು ದೊಡ್ಡ ಕೊರತೆಯಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಕೂಡ ಗಾಯದ ಸಮಸ್ಯೆಯಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಕಳೆದುಕೊಳ್ಳಲಿದ್ದಾರೆ.
10 ವರ್ಷಗಳ ಕಾಯುವಿಕೆಗೆ ಅಂತ್ಯ?
ಭಾರತ ತಂಡ ಕಳೆದ 10 ವರ್ಷಗಳಿಂದ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, 2021ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿಯನನ್ನು ಗೆಲ್ಲುವಲ್ಲಿ ಕೂಡ ಭಾರತ ತಂಡ ವಿಫಲವಾಗಿದೆ.
ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್ ತಲುಪಿರುವ ಭಾರತ, ಕಳೆದ ಬಾರಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಅಶ್ವಿನ್ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಪ್ರಮುಖ ಬಲವಾಗಿದೆ.
ಪಂದ್ಯದ ನೇರಪ್ರಸಾರ ಮಾಹಿತಿ
ಜೂನ್ 7ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ. ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅನ್ನು ಲೈವ್ ಆಗಿ ವೀಕ್ಷಿಸಬಹುದು. ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಕೂಡ ಪಂದ್ಯ ನೇರಪ್ರಸಾರವಾಗಲಿದೆ.
ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಭಾರತ: ಶುಭಮನ್ ಗಿಲ್, ರೋಹಿತ್ ಶರ್ಮಾ (ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಕೆಎಸ್ ಭರತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್ / ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications