
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿರುವ ಭಾರತ ತಂಡ ಯಶಸ್ವಿಯಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದೆ. ಜೂನ್ 7ರಿಂದ ಫೈನಲ್ ಪಂದ್ಯ ಆರಂಭವಾಗಲಿದ್ದು, ಇಂಗ್ಲೆಂಡ್‌ನ ಓವಲ್ ಅಂಗಳದಲ್ಲಿ ಭಾರತ-ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಲಿವೆ.
ಜನವರಿ ತಿಂಗಳಿನಿಂದ ಭಾರತ ತಂಡ ಬಿಡುವಿರದೆ ಸರಣಿಗಳನ್ನು ಆಡುತ್ತಿರುವುದು ಆಟಗಾರರ ಫಿಟ್ನೆಸ್ ಬಗ್ಗೆ ಚಿಂತೆಯನ್ನು ಹೆಚ್ಚಿಸಿದೆ. ಒಂದು ತಿಂಗಳ ಕಾಲ ಟೆಸ್ಟ್ ಸರಣಿ ಆಡಿದ ಬಳಿಕ, ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ, ನಂತರ ಎರಡು ತಿಂಗಳ ಕಾಲ ಐಪಿಎಲ್ ಪಂದ್ಯಾವಳಿ ನಡೆಯಲಿದೆ. ಮೇ 28ರಂದು ಫೈನಲ್ ಪಂದ್ಯ ನಡೆಯಲಿದೆ. ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಸಜ್ಜಾಗಲು ಕೇವಲ 9 ದಿನಗಳಷ್ಟೇ ಬಾಕಿ ಇರುತ್ತದೆ.
ಬಿಡುವಿರದ ಕ್ರಿಕೆಟ್ ವೇಳಾಪಟ್ಟಿ ಆಟಗಾರರ ಫಿಟ್ನೆಸ್ ಮೇಲೆ ಪ್ರಭಾವ ಬೀರಲಿದೆ ಎನ್ನುವ ಆತಂಕ ಎದುರಾಗಿದೆ. ಫೈನಲ್‌ನಲ್ಲಿ ಆಡುವ ಆಟಗಾರರ ಬಗ್ಗೆ ಬಿಸಿಸಿಐ ಹೆಚ್ಚಿನ ಕಾಳಜಿ ವಹಿಸಲಿದೆ. ಆಟಗಾರರ ಹೊರೆಯನ್ನು ಕಡಿಮೆ ಮಾಡಲು, ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ನೋಡಿಕೊಳ್ಳಲು ಎನ್‌ಸಿಎಗೆ ಸೂಚನೆ ನೀಡಿದೆ.

16 ದಿನಗಳ ಮುನ್ನವೇ ಇಂಗ್ಲೆಂಡ್‌ಗೆ ಪ್ರಯಾಣ
ನಾಲ್ಕನೇ ಟೆಸ್ಟ್ ಮುಕ್ತಾಯವಾದ ಬಳಿಕ ರೋಹಿತ್ ಶರ್ಮಾ ಈ ಬಗ್ಗೆ ಮಾತನಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಗುಂಪು ಹಂತದ ಪಂದ್ಯಗಳು ಮೇ 21ರಂದು ಮುಕ್ತಾಯವಾಗುತ್ತದೆ. 4 ತಂಡಗಳು ಮಾತ್ರ ಪ್ಲೇ ಆಫ್‌ಗೆ ಪ್ರವೇಶ ಪಡೆಯಲಿದ್ದು, ಉಳಿದ ಆರು ತಂಡಗಳು ಟೂರ್ನಿಯಿಂದ ಹೊರಬೀಳಲಿವೆ.
ಟೂರ್ನಿಯಿಂದ ಹೊರಬೀಳು ತಂಡದಲ್ಲಿರುವ ಭಾರತೀಯ ಟೆಸ್ಟ್ ತಂಡದ ಆಟಗಾರರನ್ನು ತಕ್ಷಣವೇ ಇಂಗ್ಲೆಂಡ್‌ಗೆ ಕಳುಹಿಸಲಾಗುವುದು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಈ ಮೂಲಕ ಹಲವು ಆಟಗಾರರು ಕನಿಷ್ಠ 15 ದಿನಗಳ ಮುನ್ನ ಇಂಗ್ಲೆಂಡ್‌ಗೆ ತೆರಳಲಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಿದ್ದಾರೆ ಎಂದರು.

ಆಟಗಾರರಿಗೆ ದೊಡ್ಡ ಸಮಸ್ಯೆಯಾಗುವುದಿಲ್ಲ
"ಇದು ದೊಡ್ಡ ಸಮಸ್ಯೆ ಎಂದು ನನಗೆ ಅನಿಸುವುದಿಲ್ಲ, ತಯಾರಿ ಮಾಡಿಕೊಳ್ಳುವುದರಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಫೈನಲ್‌ಗೆ ಮುನ್ನ ಸಿದ್ಧತೆ ಮಾಡಿಕೊಳ್ಳುವುದು ಮುಖ್ಯವಾಘಿದೆ. ಮೇ 21ರ ವೇಳೆಗೆ 6 ತಂಡಗಳು ಐಪಿಎಲ್‌ನಿಂದ ಹೊರಗುಳಿಯಲಿವೆ. ಆ ತಂಡಗಳಲ್ಲಿ ಭಾರತ ಟೆಸ್ಟ್ ತಂಡದ ಆಟಗಾರರು ಇದ್ದರೆ ಅವರನ್ನು ಸಾಧ್ಯವಾದಷ್ಟು ಮುಂಚಿತವಾಗಿ ಯುಕೆಗೆ ಕಳುಹಿಸಲು ಯತ್ನಿಸುತ್ತೇವೆ. ಆಟಗಾರರ ಮೇಲಿನ ಒತ್ತಡದ ಬಗ್ಗೆ ಮೇಲ್ವಿಚಾರಣೆ ನಡೆಸಲಾಗುವುದು" ಎಂದು ಅವರು ಹೇಳಿದ್ದಾರೆ.
ಭಾರತ ಟೆಸ್ಟ್ ತಂಡದಲ್ಲಿರುವ ಚೇತೇಶ್ವರ ಪೂಜಾರ ಮಾತ್ರ ಐಪಿಎಲ್‌ನಿಂದ ಹೊರಗುಳಿಯಲಿದ್ದು, ಉಳಿದ ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಆಡಲಿದ್ದಾರೆ. ಆಟಗಾರರು ಒಂದು ನಗರದಿಂದ ಇನ್ನೊಂದು ನಗರಕ್ಕೆ ಐಪಿಎಲ್ ಪಂದ್ಯಗಳಲ್ಲಿ ಆಡಲು ಪ್ರಯಾಣ ಮಾಡುತ್ತಾರೆ, ಇದು ಆಟಗಾರರಿಗೆ ಹೆಚ್ಚಿನ ದಣಿವಿನ ಕೆಲಸವಾಗಲಿದೆ. ಈ ಸಮಸ್ಯೆಗಳನ್ನು ನಿಯಂತ್ರಿಸಲು ಇಂಗ್ಲೆಂಡ್‌ನಲ್ಲಿ ಬಳಸಲಾಗುವ ಡ್ಯೂಕ್ಸ್ ಬಾಲ್‌ನೊಂದಿಗೆ ಅಭ್ಯಾಸ ಮಾಡುವಂತಹ ಆಟದ ವಿವರಗಳಿಗೆ ಸಿದ್ಧವಾಗುವುದು ಅಷ್ಟೇ ಮುಖ್ಯ ಎಂದು ರೋಹಿತ್ ಹೇಳಿದ್ದಾರೆ.