ಮಾರ್ನಸ್‌ಗೆ ನಿದ್ದೆ ಭಂಗ ಮಾಡಿದ ಸಿರಾಜ್!: ನಿದ್ದೆಗಣ್ಣಿನಲ್ಲೇ ಬ್ಯಾಟಿಂಗ್‌ಗೆ ಓಡಿದ ಆಸಿಸ್ ಸ್ಟಾರ್: ವಿಡಿಯೋ
ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಮಾರ್ನಸ್ ಲ್ಯಾಬುಶೇನ್ ನಿದ್ದೆಗೆ ಭಂಗ ಮಾಡಿದ್ದಾರೆ! ಹೌದು.. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೂರನೇ ದಿನದಾಟದಲ್ಲಿ ಮೊಹಮ್ಮದ್ ಸಿರಾಜ್ ವಾರ್ನರ್ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಆಘಾತ ನೀಡಿದರು. ಈ ಸಂದರ್ಭದಲ್ಲಿ ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಬೇಕಿದ್ದ ಆಸಿಸ್ ದಾಂಡಿಗ ಮಾರ್ನಸ್ ಲ್ಯಾಬುಶೇನ್ ಡಗೌಟ್‌ನಲ್ಲಿ ಕುಳಿತಲ್ಲೇ ನಿದ್ದೆಗೆ ಜಾರಿದ್ದರು!
ಈ ಮೂಲಕ ಟೆಸ್ಟ್ ಕ್ರಿಕೆಟ್‌ನ ಅತ್ಯುನ್ನತ ಕಾದಾಟ ನೋಡಲು ಆಗಮಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ನಿರೀಕ್ಷೆಯೇ ಮಾಡದ ದೃಶ್ಯವೊಂದು ದೊರೆತಿದೆ. ಡೇವಿಡ್ ವಾರ್ನರ್ ಅವರನ್ನು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮೂರನೇ ಇನ್ನಿಂಗ್ಸ್‌ನ ನಾಳ್ಕನೇ ಓವರ್‌ನಲ್ಲಿಯೇ ಔಟ್ ಮಾಡುವಲ್ಲಿ ಯಶಸ್ವಿಯಾದರು. ಸಿರಾಜ್ ಎಸೆದ ಚೆಂಡು ವಾರ್ನರ್ ಅವರ ಬ್ಯಾಟ್‌ನ ಕೆಳ ಭಾಗಕ್ಕೆ ಸ್ಪರ್ಶಿಸಿ ವಿಕೆಟ್ ಕೀಪರ್ ಕೆಎಸ್ ಭರತ್ ಅವರ ಕೈಗೆ ತಲುಪಿತ್ತು. ಭರತ್ ಅದ್ಭುತವಾಗಿ ಕ್ಯಾಚ್ ಪಡೆದ ಕಾರಣ ವಾರ್ನರ್ ಆಟ ಕೇವಲ 1 ರನ್‌ಗೆ ಅಂತ್ಯವಾಯಿತು.

ಈ ಸಂದರ್ಭದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಿದ್ದ ಮಾರ್ನಸ್ ಲ್ಯಾಬುಶೇನ್ ಡಗೌಟ್‌ನಲ್ಲಿ ಕುಳಿತಲ್ಲಿಯೇ ನಿದ್ದೆಗೆ ಜಾರಿದ್ದರು. ವಿಕೆಟ್ ಕಳೆದುಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳ ಕರತಾಡನದ ಸದ್ದಿಗೆ ಮಾರ್ನಸ್ ಎಚ್ಚರಗೊಂಡಾಗ ಆಸ್ಟ್ರೇಲಿಯಾ ಮೊದಲ ವಿಕೆಟ್ ಕಳೆದುಕೊಂಡಿರುವುದು ಮಾರ್ನಸ್ ಅರಿವಿಗೆ ಬಂತು. ನಂತರ ಮುಂದಿನ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಿರುವುದು ತಾನೇ ಎಂಬುದು ಮಾರ್ನಸ್‌ಗೆ ಅರಿವಾಗಿ ತಕ್ಷಣವೇ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದರು. ಈ ವಿಡಿಯೋ ಸಂಪೂರ್ಣ ನೇರಪ್ರಸಾರದಲ್ಲಿ ದಾಖಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಟ್ರೆವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಅವರ ಅದ್ಭುತ ಬ್ಯಾಟಿಂಗ್‌ನ ಕಾರಣದಿಂದಾಗಿ 469 ರನ್‌ಗಳನ್ನು ಕಲೆಹಾಕಿ ಸುಭದ್ರ ಸ್ಥಾನದಲ್ಲಿ ಕುಳಿತುಕೊಂಡಿತು. ನಂತರ ಬೌಲಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ ಆಸಿಸ್ ತಂಡ ಭಾರತವನ್ನು 296 ರನ್‌ಗೆ ಆಲೌಟ್ ಮಾಡಿದ್ದು ಮೊದಲ ಇನ್ನಿಂಗ್ಸ್‌ನಲ್ಲಿಬೃಹತ್ ಮೊತ್ತದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭಾರೀ ಸಂಕಷ್ಟದಲ್ಲಿದ್ದಾಗ ಅಜಿಂಕ್ಯಾ ರಹಾನೆ, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಅದ್ಭುತ ಜೊತೆಯಾಟ ನೀಡುವ ಮೂಲಕ ತಂಡವನ್ನು ದೊಡ್ಡ ಸಂಕಷ್ಟದಿಂದ ಪಾರು ಮಾಡಿದರು. ಹೀಗಾಗಿ ಈ ಪಂದ್ಯದಲ್ಲಿ ಕುತೂಹಲ ಉಳಿದುಕೊಂಡಿದ್ದು ಉಳಿದ ಅವಧಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಪ್ರಶ್ನೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications