ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಆರಂಭಕ್ಕೆ ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿರುವ ಸಂದರ್ಭದಲ್ಲಿ ತಂಡದ ಆಡುವ ಬಳಗ ಹೇಗಿರಬೇಕು ಎಂಬ ಬಗ್ಗೆ ಚರ್ಚೆಗಳು ತೀವ್ರವಾಗುತ್ತಿದೆ. ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಆಟಗಾರರ ಪೈಕಿ ಯಾರೆಲ್ಲಾ ಆಡಬೇಕು? ಯಾರು ಹೊರಬಿರಬೇಕು? ಯಾವ ಕ್ರಮಾಂಕದಲ್ಲಿ ಯಾರು ಕಣಕ್ಕಿಳಿಯಬೇಕು ಹೀಗೆ ನಾನಾ ಚರ್ಚೆಗಳು ಅಭಿಮಾನಿಗಳ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಕ್ರಿಕೆಟ್ ಪಂಡಿತರು ಕೂಡ ಈ ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾಜಿ ಕ್ರಿಎಕಟಿಗ ಸಂಜಯ್ ಮಂಜ್ರೇಕರ್ ಕೂಡ ಇದೇ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯವನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ.
ಟೀಮ್ ಇಂಡಿಯಾದಲ್ಲಿ ಸದ್ಯಕ್ಕೆ ಹೆಚ್ಚಾಗಿ ಚರ್ಚೆಯ ಅಂಶವಾಗಿರುವುದು ವಿಕೆಟ್ ಹಿಂದೆ ಯಾರು ಸೂಕ್ತ ಎಂಬ ಪ್ರಶ್ನೆ. ರಿಷಬ್ ಪಂತ್ ಗಾಯದಿಂದ ಅಲಭ್ಯವಾಗಿರುವ ಕಾರಣ ಆ ಜವಾಬ್ಧಾರಿಯುತ ಹೊಣೆಯನ್ನು ವಹಿಸಿಕೊಳ್ಳಲು ಯಾರು ಸೂಕ್ತ ಎಂಬುದು ಬಹಳ ಮಹತ್ವ ಪಡೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಕೆಎಸ್ ಭರತ್ ವಿಕೆಟ್ ಕೀಪರ್‌ಗಳಾಗಿ ಆಯ್ಕೆಯಾಗಿರುವ ಕಾರಣ ಯಾರಿ ಆಡುವ ಬಳಗದಲ್ಲಿ ಸ್ಥಾನ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಕೆಎಸ್ ಭರತ್ ಬದಲಿಗೆ ಇಶಾನ್ ಕಿಶನ್‌ಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇಶಾನ್ ಕಿಶನ್ ಮೊದಲಿಗೆ ತಮಡದಲ್ಲಿ ಮೀಸಲು ಆಟಗಾರನಾಗಿ ಸ್ಥಾನವನ್ನು ಪಡೆದುಕೊಂಡಿದ್ದು ಬಳಿಕ ಕೆಎಲ್ ರಾಹುಲ್ ಗಾಯಗೊಂಡು ಹೊರಬಿದ್ದ ಕಾರಣ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
"ಈ ಮಹತ್ವದ ಪಂದ್ಯದಲ್ಲಿ ನಾನು ಇಶಾನ್ ಕಿಶನ್ ಆಡುವುದನ್ನು ನೋಡಲು ಬಯಸುತ್ತೇನೆ. ಈ ಸಲಹೆ ಭಿನ್ನವಾಗಿರಬಹುದು. ಆದರೆ ಕೆಎಸ್ ಭರತ್ ಏನು ಮಾಡಬಹುದು ಎಂಬುದನ್ನು ನಾವು ಕಂಡಿದ್ದೇವೆ. ಆತ ಸ್ಥಿರ ಶೈಲಿಯ ಬ್ಯಾಟರ್ ಹಾಗೂ ಡೀಸೆಂಟ್ ವಿಕೆಟ್ ಕೀಪರ್" ಎಂದು ಸ್ಟಾರ್ ಸ್ಪೋರ್ಟ್ಸ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿಕೆ ನೀಡಿದ್ದಾರೆ ಸಂಜಯ್ ಮಂಜ್ರೇಕರ್.
ಟೀಮ್ ಇಂಡಿಯಾದಲ್ಲಿ ರಿಷಬ್ ಪಂತ್ ಕಳೆದ ಕೆಲ ವರ್ಷಗಳಿಂದ ನಿರ್ವಹಿಸುತ್ತಿದ್ದ ಪಾತ್ರವನ್ನು ವಹಿಸಲು ಇಶಾನ್ ಕಿಶನ್ ಸಾಮರ್ಥ್ಯಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ ಮಂಜ್ರೇಕರ್. ಇಶಾನ್ ಕಿಶನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 48 ಪಂದ್ಯಗಳ್ನು ಆಡಿದ್ದು 38.76ರ ಉತ್ತಮ ಸರಾಸರಿಯೊಂದಿಗೆ 2985 ರನ್‌ಗಳನ್ನು ಗಳಿಸಿದ್ದಾರೆ. ಇನ್ನು 99 ಕ್ಯಾಚ್‌ಗಳನ್ನು ಅವರು ಪಡೆದುಕೊಂಡಿದ್ದು 11 ಸ್ಟಂಪ್ ಮಾಡಿದ್ದಾರೆ.
"ಕಳೆದ ಎರಡು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿರುವ ರಿಷಬ್ ಪಂತ್ ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಕೆಳ ಕ್ರಮಾಂಖದಲ್ಲಿ ರಿಷಭ್ ಪಂತ್ ಅವರಂತಾ ಆಕ್ರಮಣಕಾರಿ ಆಟಗಾರನ ಮೂಲಕ ಎದುರಾಳಿ ಮೇಲೆ ಒತ್ತಡ ಹೇರುವ ಅಗತ್ಯವಿದೆ ಎಂದಾದರೆ ಅದಕ್ಕೆ ಇಶಾನ್ ಕಿಶನ್ ಉತ್ತರವಾಗಬಲ್ಲರು" ಎಂದಿದ್ದಾರೆ ಮಂಜ್ರೇಕರ್.
ಭಾರತ ತಂಡ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ತವರಿನಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಿತ್ತು. ಈ ಸರಣಿಯಲ್ಲಿ ಅವಕಾಶ ಪಡೆದುಕೊಂಡಿದ್ದ ವಿಕೆಟ್‌ಕೀಪರ್-ಬ್ಯಾಟರ್ ಕೆಎಸ್ ಭರತ್ ಸ್ಟಂಪ್‌ಗಳ ಹಿಂದೆ ಸಮರ್ಥವಾಗಿದ್ದರೂ ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ಆರು ಇನ್ನಿಂಗ್ಸ್‌ಗಳಲ್ಲಿ 20.20ಕ್ಕಿಂತ ಕಡಿಮೆ ಸರಾಸರಿಯಲ್ಲಿ 101 ರನ್ ಗಳಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಕೆಎಸ್ ಭರತ್ ಮೇಲೆ ಭರವಸೆ ಇಟ್ಟುಕೊಳ್ಳುತ್ತದೆಯೇ ಅಥವಾ ಇಶಾನ್ ಕಿಶನ್‌ಗೆ ಅವಕಾಶ ನೀಡುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.