ಲಂಡನ್‌ನ ಓವಲ್‌ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರು ಕ್ಯಾಮೆರಾನ್ ಗ್ರೀನ್ ಪಡೆದ ಕ್ಯಾಚ್‌ಗೆ ಔಟಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಶನಿವಾರ ಭಾರೀ ಚರ್ಚೆಯ ವಿಷಯವಾಗಿದೆ.
ಶನಿವಾರ, ಜೂನ್ 10ರಂದು ಡಬ್ಲ್ಯುಟಿಸಿ ಫೈನಲ್‌ನ 4ನೇ ದಿನದಂದು ಕ್ಯಾಮೆರಾನ್ ಗ್ರೀನ್ ಅವರ ವಿವಾದಾತ್ಮಕ ಕ್ಯಾಚ್‌ನ ಸ್ಕ್ರೀನ್‌ಶಾಟ್ ಅನ್ನು ಭಾರತದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅವರು ಇನ್‌ಸ್ಟಾಗ್ರಾಮ್ ಸ್ಟೋರಿ ಮತ್ತು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ವ್ಯಂಗ್ಯವಾಡಿದ್ದಾರೆ.

18 ರನ್ ಗಳಿಸಿ ಆಡುತ್ತಿದ್ದ ಶುಭ್ಮನ್ ಗಿಲ್ ಅವರು ನೀಡಿದ ಕ್ಯಾಚ್ ಅನ್ನು ಮೂರನೇ ಸ್ಲಿಪ್‌ನಲ್ಲಿದ್ದ ಕ್ಯಾಮೆರಾನ್ ಗ್ರೀನ್ ಪೂರ್ಣವಾಗಿ ಪಡೆಯಲು ವಿಫಲರಾಗಿದ್ದಾರೆ ಎಂಬ ಕೆಲವು ವೀಡಿಯೊಗಳು ಮತ್ತು ಚಿತ್ರಗಳಿಂದ ಸ್ಪಷ್ಟವಾಗಿದೆ. ಕ್ಯಾಚ್ ಪಡೆಯುವಾಗ ಚೆಂಡು ನೆಲಕ್ಕೆ ತಾಗಿದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮರು ವೀಕ್ಷಣೆಯಲ್ಲಿ ಕ್ಯಾಮೆರಾನ್ ಗ್ರೀನ್ ಪಡೆದ ಕ್ಯಾಚ್ ಅಸ್ಪಷ್ಟವಾಗಿದ್ದರೂ, ಮೂರನೇ ಅಂಪೈರ್ ಕ್ಲೀನ್ ಕ್ಯಾಚ್ ಎಂದು ಪರಿಗಣಿಸಿ ಶುಭ್ಮನ್ ಗಿಲ್ ಔಟ್ ಎಂದು ತೀರ್ಪು ನೀಡಿದರು.
ಇದೀಗ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಟ್ವಿಟರ್‌ನಲ್ಲಿ ಕ್ಯಾಚ್‌ನ ಚಿತ್ರವನ್ನು ಪೋಸ್ಟ್ ಮಾಡುವುದರ ಜೊತೆಗೆ ಕನ್ನಡಿ ಮತ್ತು ಫೇಸ್‌ಪಾಮ್ ಎಮೋಜಿಯನ್ನು ಒಳಗೊಂಡಿರುವ ಕ್ರಿಪ್ಟಿಕ್ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕ್ಯಾಚ್‌ನ ಚಿತ್ರದೊಂದಿಗೆ ಚಪ್ಪಾಳೆ ಇಮೋಜಿ ಹಾಕಿ ಪೋಸ್ಟ್ ಮಾಡಿ ಅಂಪೈರ್ ತೀರ್ಪಿನ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಆಸ್ಟ್ರೇಲಿಯಾ ನೀಡಿರುವ 444 ರನ್‌ಗಳ ದೊಡ್ಡ ಮೊತ್ತದ ಚೇಸಿಂಗ್‌ನಲ್ಲಿರುವ ರೋಹಿತ್ ಶರ್ಮಾ ಬಳಗ, ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಕಲೆಹಾಕಿದೆ. ಐದನೇ ಹಾಗೂ ಅಂತಿಮ ದಿನದಂದು ಭಾರತದ ಗೆಲುವಿಗೆ ಇನ್ನೂ 280 ರನ್‌ಗಳ ಅವಶ್ಯಕತೆ ಇದ್ದು, ಕೈಯಲ್ಲಿ 7 ವಿಕೆಟ್ ಉಳಿದಿವೆ.
ಆಸ್ಟ್ರೇಲಿಯಾ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿ ಮಧ್ಯೆ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ದೃಢವಾಗಿ ನಿಂತು ಆಡುತ್ತಿದ್ದು, ಭಾರತ ಇತಿಹಾಸ ಸೃಷ್ಟಿಸಲು ಇನ್ನೂ 280 ರನ್‌ಗಳ ಅಗತ್ಯವಿದೆ. ಫೈನಲ್ ಪಂದ್ಯದ ಅಂತಿಮ ದಿನವಾದ ಭಾನುವಾರ, ಜೂನ್ 11 ಕುತೂಹಲಕಾರಿ ಕೆರಳಿಸಿದೆ.
ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ 44 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ಅಜಿಂಕ್ಯ ರಹಾನೆ 20 ರನ್ ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಜೋಡಿ ನಾಲ್ಕನೇ ವಿಕೆಟ್‌ಗೆ 71 ರನ್‌ಗಳ ಜೊತೆಯಾಟ ನೀಡಿದೆ.

ಅಲೆಕ್ಸ್ ಕ್ಯಾರಿ ಅವರ ಅಜೇಯ 66 ರನ್‌ಗಳ ಸಹಾಯದಿಂದ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 270 ರನ್ ಗಳಿಸಿ ಮಧ್ಯಾಹ್ನದ ಅವಧಿಯಲ್ಲಿ ಡಿಕ್ಲೇರ್ ಮಾಡಿಕೊಂಡಿತು.