ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಶುಕ್ರವಾರ, ಜೂನ್ 9ರಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಮಹತ್ವದ ದಾಖಲೆ ಬರೆದರು. ಭಾರತದವರೇ ಆದ ಬಿಷನ್ ಸಿಂಗ್ ಬೇಡಿ ಅವರನ್ನು ಮೀರಿಸಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದೇಶದ ಅತ್ಯಂತ ಯಶಸ್ವಿ ಎಡಗೈ ಸ್ಪಿನ್ನರ್ ಎನಿಸಿಕೊಂಡರು.
ಲಂಡನ್‌ನ ಓವಲ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಈ ಸಾಧನೆ ಮಾಡಿದರು. ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಅವರು ಸ್ಟೀವ್ ಸ್ಮಿತ್ (34) ಮತ್ತು ಟ್ರಾವಿಸ್ ಹೆಡ್ (18) ವಿಕೆಟ್ ಪಡೆದರು. ಜಡೇಜಾ 9 ಓವರ್‌ಗಳಲ್ಲಿ 25 ರನ್‌ಗೆ 2 ವಿಕೆಟ್ ಪಡೆದು ಮೂರನೇ ದಿನದಾಟ ಕೊನೆಗೊಳಿಸಿದರು.

ರವೀಂದ್ರ ಜಡೇಜಾ 65 ಟೆಸ್ಟ್ ಪಂದ್ಯಗಳಲ್ಲಿ 24.25ರ ಸರಾಸರಿ ಮತ್ತು 2.44ರ ಎಕಾನಮಿ ದರದಲ್ಲಿ 267 ವಿಕೆಟ್‌ಗಳನ್ನು ಪಡೆದಿದ್ದಾರೆ. ಮಾಜಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ 67 ಪಂದ್ಯಗಳಲ್ಲಿ 266 ವಿಕೆಟ್‌ಗಳನ್ನು ಕಬಳಿಸಿದ್ದರು.
ಒಟ್ಟಾರೆಯಾಗಿ, ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಅತ್ಯಂತ ಯಶಸ್ವಿ ಎಡಗೈ ಸ್ಪಿನ್ನರ್ ಎನಿಸಿಕೊಂಡರು. ಶ್ರೀಲಂಕಾದ ರಂಗನಾ ಹೆರಾತ್ (93 ಪಂದ್ಯಗಳಲ್ಲಿ 433 ವಿಕೆಟ್), ಡೇನಿಯಲ್ ವೆಟ್ಟೋರಿ (113 ಪಂದ್ಯಗಳಲ್ಲಿ 362 ವಿಕೆಟ್) ಮತ್ತು ಇಂಗ್ಲೆಂಡ್‌ನ ಡೆರೆಕ್ ಅಂಡರ್‌ವುಡ್ (86 ಪಂದ್ಯಗಳಲ್ಲಿ 297 ವಿಕೆಟ್) ನಂತರದ ಸ್ಥಾನದಲ್ಲಿ ರವೀಂದ್ರ ಜಡೇಜಾ ಇದ್ದಾರೆ.
ಭಾರತದ ಈ ಎಡಗೈ ಆಲ್‌ರೌಂಡರ್ 2023ರಲ್ಲಿ ಟೆಸ್ಟ್ ಸ್ವರೂಪದಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆಡಿದ ಐದು ಪಂದ್ಯಗಳಲ್ಲಿ ಅವರು 30.50 ಸರಾಸರಿಯಲ್ಲಿ 183 ರನ್ ಗಳಿಸಿದ್ದಾರೆ. ಅತ್ಯುತ್ತಮ ಸ್ಕೋರ್ 70 ರನ್‌ಗಳೊಂದಿಗೆ ಒಂದು ಅರ್ಧಶತಕ ಗಳಿಸಿದ್ದಾರೆ.

ರವೀಂದ್ರ ಜಡೇಜಾ 19.84ರ ಸರಾಸರಿ ಮತ್ತು 2.63ರ ಎಕಾನಮಿ ರೇಟ್‌ನಲ್ಲಿ 25 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಈ ವರ್ಷದ ಇನ್ನಿಂಗ್ಸ್‌ನಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು 42 ರನ್‌ಗಳಿಗೆ 7 ವಿಕೆಟ್ ಆಗಿದೆ.
2023ರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾ ಎಂಟು ಪಂದ್ಯಗಳ ಒಂಬತ್ತು ಇನ್ನಿಂಗ್ಸ್ ಆಡಿದ್ದು, 32.75 ಸರಾಸರಿಯಲ್ಲಿ ಒಂದು ಅರ್ಧ ಶತಕದೊಂದಿಗೆ 262 ರನ್ ಗಳಿಸಿದ್ದಾರೆ. ಎಂಟು ಪಂದ್ಯಗಳಲ್ಲಿ 21.33ರ ಸರಾಸರಿ ಮತ್ತು 2.78ರ ಎಕಾನಮಿ ದರದಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ.
6ನೇ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 469 ರನ್‌ಗಳಿಗೆ ಆಲೌಟ್ ಆಗಿದ್ದರೆ, ಪ್ರತ್ಯುತ್ತರವಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 196 ರನ್‌ಗಳಿಗೆ ಸರ್ವಪತನ ಕಂಡಿತು. 173 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸೀಸ್ ಪಡೆ, ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 123 ರನ್ ಗಳಿಸಿ ಒಟ್ಟು 296 ರನ್‌ಗಳ ಮುನ್ನಡೆ ಸಾಧಿಸಿತ್ತು.
ನಾಲ್ಕನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ 41 ರನ್ ಗಳಿಸಿದ್ದ ಮಾರ್ನಸ್ ಲ್ಯಾಬುಸ್ಚಾಗ್ನೆ ವಿಕೆಟ್ ಕಳೆದುಕೊಂಡಿತು. ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಚೇತೇಶ್ವರ ಪೂಜಾರಗೆ ಕ್ಯಾಚ್ ನೀಡಿ ಹೊರನಡೆದರು.
ನಂತರ 25 ರನ್ ಗಳಿಸಿ ನಿಧಾನವಾಗಿ ಆಡುತ್ತಿದ್ದ ಕ್ಯಾಮರೂನ್ ಗ್ರೀನ್ ಅವರನ್ನು ರವೀಂದ್ರ ಜಡೇಜಾ ಬೌಲ್ಡ್ ಮಾಡಿದರು. ಸದ್ಯ ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 201 ರನ್ ಗಳಿಸಿದ್ದು, ಒಟ್ಟಾರೆ 354 ರನ್‌ಗಳ ಮುನ್ನಡೆ ಸಾಧಿಸಿದ್ದು, ಭಾರತಕ್ಕೆ ಬೃಹತ್ ಮೊತ್ತದ ಟಾರ್ಗೆಟ್ ನೀಡಲು ಯೋಜನೆ ಹಾಕಿಕೊಂಡಿದೆ.